ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಡೀ ದೇಶದಲ್ಲಿ ಬೆಂಗಳೂರಿನಲ್ಲಿ ಮಾತ್ರ ಜನರ ಮೇಲೆ ಕಸದ ಸೆಸ್ ಜೊತೆಗೆ, ಬಳಕೆದಾರರ ಶುಲ್ಕ ವಿಧಿಸಲಾಗಿದೆ. ಕಸದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ರಸ ಮಾಡಲು ಯೋಜನೆ ತಂದಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ (R Ashok) ಆರೋಪಿಸಿದ್ದಾರೆ.
ಬಿಜೆಪಿ ನಿಯೋಗವು, ‘ಬೆಂಗಳೂರಿನಲ್ಲಿ ದುಬಾರಿ ಬೆಲೆ ಏರಿಕೆ’ ವಿರುದ್ಧ ಇಂದು ಬಿಬಿಎಂಪಿ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಿತು. ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಆರ್. ಅಶೋಕ್ ಅವರು, ಇಡೀ ದೇಶದಲ್ಲಿ ಕಸ ವಿಲೇವಾರಿಗೆ ಗರಿಷ್ಠ ತೆರಿಗೆ ಹಾಕಿದ ಪುಣ್ಯಾತ್ಮರು ಈ ಕಾಂಗ್ರೆಸ್ಸಿನವರು. ಹಾಲಿನಿಂದ ಆಲ್ಕೋಹಾಲ್‌ವರೆಗೆ ದುಬಾರಿ ದರ ಏರಿಸಲಾಗಿದೆ. ದರ ಏರಿಸಿದ್ದರಿಂದ ಕರೆಂಟ್ ಮುಟ್ಟಿದರೆ ಶಾಕ್ ಹೊಡೆಯುವಂತಾಗಿದೆ ಎಂದು ದೂರಿದರು.
ಹಿಂದೆ ಕೆಂಪೇಗೌಡರು ನಾಡು ಕಟ್ಟಿ ನಾಡಪ್ರಭು ಎನಿಸಿದ್ದರು. ಕಾಂಗ್ರೆಸ್ಸಿನವರು ನಾಡು ಹಾಳು ಮಾಡಿದ ಬಿರುದನ್ನು ತೆಗೆದುಕೊಂಡಿದ್ದಾರೆ ಎಂದು ಟೀಕಿಸಿದರು.
ಕಸದ ಸೆಸ್ 240 ಕೋಟಿ ಸಂಗ್ರಹವಾಗುತ್ತದೆ. ಕಸದ ನಿರ್ವಹಣೆಗೆ 145 ಕೋಟಿಗೆ ಟೆಂಡರ್ ಆಗಿದೆ. ಬಳಕೆದಾರರ ಶುಲ್ಕ ಸಂಗ್ರಹಿಸಿದರೆ 500 ರಿಂದ 600 ಕೋಟಿ ಲಭಿಸಲಿದೆ. ಯಾರ ಮನೆ ಹಾಳು ಮಾಡಲು ಈ ಶುಲ್ಕ ಸಂಗ್ರಹಿಸುತ್ತೀರಿ ಎಂದು ಪ್ರಶ್ನಿಸಿದ ಅವರು, ಇತರ ರಾಜ್ಯಗಳಲ್ಲಿ ಒಂದೋ ಸೆಸ್ ಇಲ್ಲವೇ ಬಳಕೆದಾರರ ಶುಲ್ಕ ಸಂಗ್ರಹಿಸುತ್ತಾರೆ. ಇಲ್ಲಿ ಎರಡನ್ನೂ ಸಂಗ್ರಹಿಸುತ್ತಾರೆ. ಇದರಿಂದ ಬಾಡಿಗೆ ಹೆಚ್ಚಾಗುತ್ತದೆ. ಬಾಡಿಗೆದಾರರಿಗೂ ಮನೆ ಮಾಲೀಕರಿಗೂ ಜಗಳ ಶುರುವಾಗುತ್ತದೆ ಎಂದು ಆರೋಪಿಸಿದರು.