ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಯಾಗಿದ್ದ ಬೆಂಗಳೂರಿನ ಬಿ.ವಿ. ನಾಗರತ್ನ 2027ರಲ್ಲಿ ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಾಗಲಿದ್ದಾರೆ. ಆ ಮೂಲಕ ಈ ಹುದ್ದೆ ಅಲಂಕರಿಸಿದ ಪ್ರಥಮ ಮಹಿಳೆ ಎನಿಸಿಕೊಳ್ಳಲಿದ್ದಾರೆ.
ಸರ್ವೋಚ್ಚ ನ್ಯಾಯಾಲಯದ ಕೊಲಿಜಿಯಂನ ಹಾಲಿ ಸದಸ್ಯರಲ್ಲಿ ಒಬ್ಬರಾದ ನ್ಯಾಯಮೂರ್ತಿ ಅಭಯ್ ಎಸ್. ಓಕಾ ನಿವೃತ್ತರಾದ ಹಿನ್ನೆಲೆಯಲ್ಲಿ ನ್ಯಾ. ಬಿ.ವಿ.ನಾಗರತ್ನ ಮೇ 25ರಿಂದ ಕೊಲಿಜಿಯಂನ ಭಾಗವಾಗಿದ್ದಾರೆ. ಸುಪ್ರೀಂ ಕೋರ್ಟ್ ಕೊಲಿಜಿಯಂ ಕೇವಲ 5 ಅತ್ಯಂತ ಹಿರಿಯ ನ್ಯಾಯಾಧೀಶರನ್ನು ಒಳಗೊಂಡಿರುತ್ತದೆ. ಇದರಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ಕೂಡ ಸೇರಿದ್ದಾರೆ.
ಸುಪ್ರೀಂ ಕೋರ್ಟ್ನ ಐವರು ಹಿರಿಯ ನ್ಯಾಯಮೂರ್ತಿಗಳನ್ನು ಒಳಗೊಂಡಿರುವ ಕೊಲಿಜಿಯಂ, ಸುಪ್ರೀಂ ಕೋರ್ಟ್ಗೆ ನ್ಯಾಯಮೂರ್ತಿಗಳನ್ನು ನೇಮಿಸುವ ಜತೆಗೆ ಹೈಕೋರ್ಟ್ ನ್ಯಾಯಮೂರ್ತಿಗಳ ವರ್ಗಾವಣೆ ನಿರ್ಧರಿಸುವ ಜವಾಬ್ದಾರಿ ಹೊಂದಿದೆ.
ಸಿಜೆಐ ಗವಾಯಿ ಅವರ ಅಧಿಕಾರಾವಧಿ ಪ್ರಾರಂಭವಾದಾಗ ಕೊಲಿಜಿಯಂನಲ್ಲಿ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ , ಅಭಯ್ ಎಸ್. ಓಕಾ, ವಿಕ್ರಮ್ ನಾಥ್ ಮತ್ತು ಜೆ.ಕೆ.ಮಹೇಶ್ವರಿ ಇದ್ದರು. ನ್ಯಾಯಮೂರ್ತಿ ಓಕಾ ಹುದ್ದೆಯಿಂದ ನಿವೃತ್ತರಾಗಿದ್ದು, ತೆರವಾದ ಕೊಲಿಜಿಯಂನ ಒಂದು ಸ್ಥಾನಕ್ಕೆ ನಾಗರತ್ನ ನೇಮಕವಾಗಿದ್ದಾರೆ.
ದೇಶದ 5ನೇ ಹಿರಿಯ ನ್ಯಾಯಾಧೀಶೆಯಾಗಿರುವ ಬಿ.ವಿ.ನಾಗರತ್ನ 2027ರ ಸೆಪ್ಟೆಂಬರ್ 11ರಂದು ಭಾರತದ 50ನೇ ಮುಖ್ಯ ನ್ಯಾಯಮೂರ್ತಿ ಎನಿಸಿಕೊಳ್ಳಲಿದ್ದಾರೆ. ಆ ಮೂಲಕ ಈ ಹುದ್ದೆಯನ್ನು ತಲುಪಿದ ಮೊದಲ ಮಹಿಳೆಯಾಗಲಿದ್ದಾರೆ. ಸುಪ್ರೀಂ ಕೋರ್ಟ್ ಇತಿಹಾಸದಲ್ಲಿಇದುವರೆಗೂ ಮಹಿಳಾ ನ್ಯಾಯಮೂರ್ತಿ ಈ ಉನ್ನತ ಹುದ್ದೆಗೆ ಏರಿರಲಿಲ್ಲ.