ಹೊಸದಿಗಂತ ಡಿಜಿಟಲ್ ಡೆಸ್ಕ್:
12 ವರ್ಷದ ಹಿಂದೆ ಒಂದು ಬಾರಿ ಮಾತ್ರ ಪಾಕಿಸ್ತಾನಕ್ಕೆ ಹೋಗಿದ್ದೆ ಎಂದು ಹೇಳಿದ್ದ ಕಾಂಗ್ರೆಸ್ ಉಪ ನಾಯಕ ಗೌರವ್ ಗೊಗೊಯ್ ವಿರುದ್ಧ ಅಸ್ಸಾಂ ಮುಖ್ಯಮಂತ್ರಿ ಹಿಮಾಂತ್ ಬಿಸ್ವಾ ಶರ್ಮಾ ಗುಡುಗಿದ್ದಾರೆ.
ಗೌರವ್ ಗೊಗೊಯ್ ಪಾಕಿಸ್ತಾನದೊಂದಿಗೆ ನಂಟು ಹೊಂದಿದ್ದು, ಅಲ್ಲಿಗೆ ಹೋಗಿ ಬಂದಿದ್ದಾರೆ ಎಂದು ಬಿಜೆಪಿ ನಿರಂತರವಾಗಿ ಆರೋಪ ಮಾಡಿಕೊಂಡು ಬರುತ್ತಿದೆ. ಈ ಕುರಿತು ಬುಧವಾರ ಗೊಗೊಯ್ ಸ್ಪಷ್ಟನೆ ನೀಡುತ್ತಾ 12 ವರ್ಷದ ಹಿಂದೆ ಒಂದು ಬಾರಿ ಮಾತ್ರ ಪಾಕಿಸ್ತಾನಕ್ಕೆ ಹೋಗಿದ್ದೆ. ಈ ವಿಚಾರವನ್ನು ಬಿಜೆಪಿ ಸಿ-ಗ್ರೇಡ್ ಬಾಲಿವುಡ್ ಸಿನಿಮಾದಂತೆ ಎಳೆಯುತ್ತಿದೆ. ಅದು ದಯನೀಯವಾಗಿ ಫ್ಲಾಪ್ ಆಗುತ್ತಿದೆ ಎಂದು ಹೇಳಿದ್ದರು.
ಇದೀಗ ಗೊಗೊಯ್ ಸ್ಪಷ್ಟನೆ ನೀಡುತ್ತಿದ್ದಂತೆಯೇ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ಅಸ್ಸಾಂ ಮುಖ್ಯಮಂತ್ರಿ ಬಿಸ್ವಾ ಶರ್ಮಾ, ಕೊನೆಗೂ ಕಾಂಗ್ರೆಸ್ ಸಂಸದ ಗೌರವ್ ಗೊಗೋಯ್ ಪಾಕಿಸ್ತಾನಕ್ಕೆ ಭೇಟಿ ನೀಡಿರುವುದನ್ನು ಒಪ್ಪಿಕೊಂಡಿದ್ದಾರೆ. ಆದರೆ ಇದು ಕೇವಲ ಆರಂಭವಾಗಿದೆ, ಅಂತ್ಯವಲ್ಲ ಎಂದು ಸ್ಪಷ್ಟವಾಗಿ ಹೇಳುತ್ತೇವೆ. ಮುಂದಿರುವುದು ಮತ್ತಷ್ಟು ಗಂಭೀರವಾಗಿದೆ. ಪ್ರತಿಯೊಂದಕ್ಕೂ ಸಮಂಜಸವಾದ ಆಧಾರವಿದೆ, ನಂಬಲರ್ಹ ಮಾಹಿತಿಗಳು, ದಾಖಲೆಗಳು ಇರುವುದಾಗಿ ತಿಳಿಸಿದ್ದಾರೆ.