ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಮಲ್ ಹಾಸನ್ ಕನ್ನಡ ವಿವಾದಕ್ಕೆ ಸಂಬಂಧಿಸಿದಂತೆ ಇದೀಗ ಆಕ್ರೋಶದ ಕಟ್ಟೆಯೊಡೆದಿದೆ. ನಟ ಕ್ಷಮೆ ಕೇಳಲ್ಲ ಎಂದು ಹೇಳಿದ ಬೆನ್ನಲ್ಲೇ ಅವರ ಭಾವಚಿತ್ರದ ಬ್ಯಾನರ್ಗೆ ಬೆಂಕಿ ಹಚ್ಚಿ ಕನ್ನಡಾಭಿಮಾನಿ ಪ್ರತಿಭಟಿಸಿದ್ದಾರೆ.
ನಗರದ ಬಸವೇಶ್ವರನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪವಿತ್ರ ಪ್ಯಾರಡೈಸ್ ಸಿಗ್ನಲ್ ಬಳಿ ಈ ಘಟನೆ ನಡೆದಿದ್ದು, ರಾತ್ರೋ ರಾತ್ರಿ ಓರ್ವ ಕನ್ನಡಾಭಿಮಾನಿ ಕಮಲ್ ಹಾಸನ್ ಹೇಳಿಕೆಗೆ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದ್ದಾರೆ. ಜೊತೆಗೆ ಕಮಲ್ ಹಾಸನ್ ಅವರ ಭಾವಚಿತ್ರದ ಬ್ಯಾನರ್ಗೆ ಬೆಂಕಿ ಹಚ್ಚಿ ಕಿಡಿಕಾರಿದ್ದಾರೆ.
ಮೇ 27ರಂದು `ಥಗ್ ಲೈಫ್’ ಸಿನಿಮಾದ ಪ್ರಚಾರಕ್ಕಾಗಿ ಚಿತ್ರತಂಡ ಬೆಂಗಳೂರಿಗೆ ಆಗಮಿಸಿತ್ತು. ಸಿನಿಮಾದ ನಾಯಕ ಕಾಲಿವುಡ್ ನಟ ಕಮಲ್ ಹಾಸನ್ ಅವರು ಕೂಡ ಆಗಮಿಸಿದ್ದರು. ಈ ವೇಳೆ ಕಮಲ್ ಹಾಸನ್ `ತಮಿಳಿನಿಂದ ಕನ್ನಡ ಹುಟ್ಟಿದ್ದು’ ಎಂದು ಹೇಳಿಕೆ ನೀಡುವ ಮೂಲಕ ವಿವಾದ ಹುಟ್ಟುಹಾಕಿದ್ದರು.