ಹೊಸದಿಗಂತ ಡಿಜಿಟಲ್ ಡೆಸ್ಕ್:
ಏಪ್ರಿಲ್ 22 ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ 26 ಜನರಲ್ಲಿ ಒಬ್ಬರಾದ ಶುಭಂ ದ್ವಿವೇದಿ ಅವರ ಕುಟುಂಬವನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಭೇಟಿಯಾಗಿದ್ದಾರೆ.
ಪ್ರಧಾನಿ ಮೋದಿ ಅವರು ಇಂದು ಚಕೇರಿ ವಿಮಾನ ನಿಲ್ದಾಣದಲ್ಲಿ ಶುಭಂ ಅವರ ಪತ್ನಿ ಅಶಾನ್ಯಾ ಮತ್ತು ಅವರ ಪೋಷಕರಾದ ಸಂಜಯ್ ದ್ವಿವೇದಿ ಮತ್ತು ಸೀಮಾ ದ್ವಿವೇದಿ ಅವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು.
ಈ ವೇಳೆ ಪ್ರಧಾನಿ ಮೋದಿ ಶುಭಂ ದ್ವಿವೇದಿ ಸಾವಿಗೆ ಸಂತಾಪ ಸೂಚಿಸಿದ್ದು, ಭಯೋತ್ಪಾದನೆಯ ವಿರುದ್ಧ ಭಾರತದ ಹೋರಾಟ ಮುಂದುವರಿಯುತ್ತದೆ ಎಂದು ದ್ವಿವೇದಿ ಕುಟುಂಬಕ್ಕೆ ಪ್ರಧಾನಿ ಭರವಸೆ ನೀಡಿದರು.
ಪ್ರಧಾನಿ ಮೋದಿ ಭೇಟಿಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಶಾನ್ಯಾ ದ್ವಿವೇದಿ ಅವರು, ಆಪರೇಷನ್ ಸಿಂದೂರ್ ಜೊತೆ ನಮಗೆ ವೈಯಕ್ತಿಕವಾಗಿ ಸಂಬಂಧವಿದೆ ಅನಿಸುತ್ತಿದೆ, ‘ಪ್ರಧಾನಿ ನರೇಂದ್ರ ಮೋದಿ ನಮ್ಮ ಕುಟುಂಬ ಸದಸ್ಯರಂತೆ ಮಾತನಾಡಿದರು. ದುರಂತದ ಬಗ್ಗೆ ಮಾತನಾಡುವಾಗ ಅವರು ಭಾವುಕರಾದರು ಎಂದು ಹೇಳಿದರು.