ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದಲ್ಲಿ ವರುಣನ ಆರ್ಭಟ ಜೋರಾಗಿದ್ದು,, ಮಳೆಗೆ ಕನಿಷ್ಠ ಐದು ಜನರು ಸಾವನ್ನಪ್ಪಿದ್ದು, ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ.
ಭಾರತೀಯ ಹವಾಮಾನ ಇಲಾಖೆ ಎಂಟು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಮತ್ತು ಉಳಿದ ಆರು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಿದೆ .
ಜೂನ್ 5 ರವರೆಗೆ ರಾಜ್ಯಾದ್ಯಂತ ಭಾರೀ ಮಳೆ ಮುಂದುವರಿಯಲಿದೆ. ಕೇರಳದಲ್ಲಿ ಮುಂದಿನ ಐದು ದಿನಗಳವರೆಗೆ ಪಶ್ಚಿಮ ದಿಕ್ಕಿನ ಗಾಳಿ ಬೀಸುವ ನಿರೀಕ್ಷೆಯಿದೆ. ಗುಡ್ಡಗಾಡು ಪ್ರದೇಶಗಳಲ್ಲಿ ಮತ್ತು ನದಿ ದಂಡೆಯ ಬಳಿ ಹೈ ಅಲರ್ಟ್ ಘೋಷಿಸಲಾಗಿದೆ ಎಂದು ರಾಜ್ಯ ಕಂದಾಯ ಸಚಿವ ಕೆ. ರಾಜನ್ ತಿಳಿಸಿದ್ದಾರೆ.ವೇಗವಾಗಿ ಗಾಳಿ ಬೀಸುತ್ತಿದ್ದು, ಮುಂದಿನ ಐದು ದಿನಗಳ ಕಾಲ ರಾಜ್ಯದಾದ್ಯಂತ ಭಾರಿ ಮಳೆ ಮುಂದುವರಿಯಲಿದೆ. ಗುಡ್ಡಗಾಡು ಪ್ರದೇಶಗಳಿಗೆ ಅನಗತ್ಯ ಪ್ರವಾಸ ಕೈಗೊಳ್ಳಬಾರದು’ಎಂದು ಜನರಿಗೆ ಸಲಹೆ ನೀಡಿದ್ದಾರೆ.
ಪತ್ತನಂತಿಟ್ಟ, ಅಲಪ್ಪುಳ, ಕೊಟ್ಟಾಯಂ, ಇಡುಕ್ಕಿ, ಎರ್ನಾಕುಲಂ, ತ್ರಿಶೂರ್, ಕಣ್ಣೂರು ಹಾಗೂ ಕಾಸರಗೋಡು ಜಿಲ್ಲೆಗಳಿಗೆ ಹವಾಮಾನ ಇಲಾಖೆಯು (ಐಎಂಡಿ) ‘ರೆಡ್ ಆಲರ್ಟ್’, ಉಳಿದಂತೆ ಆರು ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’ ಘೋಷಿಸಿದೆ.
ಕಣ್ಣೂರು, ಎರ್ನಾಕುಳಂ, ಕಾಸರಗೋಡು ಜಿಲ್ಲೆಗಳಲ್ಲಿ ಮಳೆಗೆ ಭಾರೀ ಹಾನಿಯಾಗಿದೆ. ಕೊಟ್ಟಾಯಂ ಜಿಲ್ಲೆಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಇಬ್ಬರು ಯುವಕರು ಮುಳುಗಿ ಸಾವನ್ನಪ್ಪಿದ್ದರೆ, ತಿರುವನಂತಪುರಂ ಬಳಿಯ ಸಮುದ್ರದಲ್ಲಿ ಮೀನುಗಾರಿಕೆ ದೋಣಿ ಮಗುಚಿ ಬಿದ್ದು ಮೀನುಗಾರನೊಬ್ಬ ಸಾವನ್ನಪ್ಪಿದ್ದಾನೆ. ಕೊಚ್ಚಿಯಲ್ಲಿ ಮರ ಬಿದ್ದು 85 ವರ್ಷದ ಎಂಜಿಎನ್ಆರ್ಇಜಿಎ ಕಾರ್ಯಕರ್ತೆಯೊಬ್ಬರು ಮೃತಪಟ್ಟಿದ್ದಾರೆ. ಪಶ್ಚಿಮ ಬಂಗಾಳದ ಮೂಲದ ವ್ಯಕ್ತಿಯೊಬ್ಬ ಕೊಚ್ಚಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.