ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕದಲ್ಲಿ ಥಗ್‌ಲೈಫ್ ಸಿನಿಮಾ ರಿಲೀಸ್ ಆಗಬಾರದು ಎಂದು ಕನ್ನಡಿಗರು ಹೇಳ್ತಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಸಿನಿಮಾ ರಿಲೀಸ್ ಇರುವಾಗ ನಟ ಕಮಲ್ ಹಾಸನ್ ಬೇಜವಾಬ್ದಾರಿ ಹೇಳಿಕೆಯೊಂದನ್ನು ನೀಡಿದ್ದಾರೆ.
ತಮಿಳಿನಿಂದ ಕನ್ನಡ ಹುಟ್ಟಿದ್ದು ಎಂದು ಹೇಳಿದ್ದು, ಕನ್ನಡಿಗರನ್ನು ಕೆರಳಿಸಿದೆ. ಕನ್ನಡಿಗರಿಗೆ ಕ್ಷಮೆ ಕೇಳಬೇಕು ಎಂದು ಎಷ್ಟೇ ಒತ್ತಾಯ ಬಂದರೂ ತಪ್ಪು ಮಾಡಿಲ್ಲ ಕ್ಷಮೆ ಕೇಳೋ ಮಾತೇ ಇಲ್ಲ ಎಂದು ಕಮಲ್ ಹೇಳಿದ್ದಾರೆ.
ಈ ಬೆನ್ನಲ್ಲೇ ಕರ್ನಾಟಕದ ಕೆಲವು ಥಿಯೇಟರ್‌ಗಳಲ್ಲಿ ಥಗ್‌ಲೈಫ್ ಸಿನಿಮಾ ರಿಲೀಸ್ ಆಗುತ್ತಿದೆ. ಇದು ಕನ್ನಡಪರ ಹೋರಾಟಗಾರರು ಹಾಗೂ ಕನ್ನಡಿಗರನ್ನು ಕೆರಳಿಸಿದ್ದು, ಸಿನಿಮಾ ಪ್ರದರ್ಶನವಾದರೆ ಥಿಯೇಟರ್‌ಗೆ ಬೆಂಕಿ ಹಚ್ಚುತ್ತೇವೆ ಎಂದು ಎಚ್ಚರಿಕೆ ನೀಡಲಾಗಿದೆ.
ಮೇ 30ರಂದು ಸುದ್ದಿಗೋಷ್ಠಿ ನಡೆಸಿದ ಕರವೇ ಅಧ್ಯಕ್ಷ ನಾರಾಯಣಗೌಡ, ಯಾವುದಾದರೂ ಚಿತ್ರಮಂದಿರಗಳು ಕಮಲ್ ಹಾಸನ್ ನಟನೆಯ ‘ಥಗ್ ಲೈಫ್’ ಸಿನಿಮಾ ಬಿಡುಗಡೆ ಮಾಡಿದಲ್ಲಿ ಚಿತ್ರಮಂದಿರಗಳಿಗೆ ಬೆಂಕಿ ಹಚ್ಚುವುದಾಗಿ ಎಚ್ಚರಿಕೆ ನೀಡಿದ್ದಾರೆ. ಆದಾಗ್ಯೂ ಕೆಲವರು ಈ ಸಾಹಸಕ್ಕೆ ಮುಂದಾಗುತ್ತಿದ್ದಾರೆ.
ಬೆಂಗಳೂರಿನ ಖ್ಯಾತ ಸಿಂಗಲ್ ಸ್ಕ್ರೀನ್ಗಳಲ್ಲಿ ಒಂದಾದ ‘ವಿಕ್ಟರಿ ಸಿನಿಮಾಸ್’ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದೆ. ಶೀಘ್ರವೇ ‘ಥಗ್ ಲೈಫ್’ ಚಿತ್ರಕ್ಕೆ ಅಡ್ವಾನ್ಸ್ ಬುಕಿಂಗ್ ಓಪನ್ ಮಾಡಲಾಗುವುದು ಎಂದು ಹೇಳಿದೆ. ಇದು ಕನ್ನಡಿಗರನ್ನು ಕೆರಳಿಸಿದೆ.
ಐಪಿಎಲ್ ಕಾರಣಕ್ಕೆ ಯಾವುದೇ ದೊಡ್ಡ ಸಿನಿಮಾಗಳು ರಿಲೀಸ್ ಆಗಿರಲಿಲ್ಲ. ಹೀಗಾಗಿ, ದೊಡ್ಡ ಸಿನಿಮಾಗಳು ರಿಲೀಸ್ ಆಗುವುದನ್ನೇ ಥಿಯೇಟರ್ಗಳು ಎದುರು ನೋಡುತ್ತಿದ್ದರು. ಆದರೆ, ಈ ವಿವಾದಿಂದ ಥಿಯೇಟರ್ ಮಾಲೀಕರು ಚಿಂತೆಗೆ ಒಳಗಾಗಿದ್ದಾರೆ.