ಹೊಸದಿಗಂತ ವರದಿ ಹಾಸನ :
ಅರಸೀಕೆರೆ ಪಟ್ಟಣದ ಕೆಎಸ್ಆರ್‌ಟಿಸಿ ಡಿಪೋ ಬಳಿ ನೂತನ ಕಟ್ಟಡ ಕಂಟ್ರ್ಯಾಕ್ಟ್ ಮಾಡಿಸುತ್ತಿದ್ದ ಕಂಟ್ರಾಕ್ಟರ್‌ನ ಚಿನ್ನಕ್ಕಾಗಿ ಬರ್ಬರ ಹತ್ಯೆ ಮಾಡಿರುವ ಘಟನೆ ನಡೆದಿದೆ
ವಿಜಯಕುಮಾರ್ (46) ಕೊಲೆಯಾದ ಕಂಟ್ರಾಕ್ಟರ್. ಹಾಸನ ಜಿಲ್ಲೆ, ಅರಸೀಕೆರೆ ಪಟ್ಟಣದ, ಕೆಎಸ್‌ಆರ್‌ಟಿಸಿ ಬಸ್ ಡಿಪೋ ಮುಂಭಾಗ ಕೊಲೆ ಮಾಡಲಾಗಿದೆ. ಗಾರೆ ಕೆಲಸಕ್ಕಾಗಿ ಬಿಹಾರ ಮೂಲದ ವಿಕ್ರಂ ಮತ್ತು ಸಚಿನ್ ಎಂಬುವವರನ್ನು ಮೃತ ವಿಜಯಕುಮಾರ್ ಅವರೇ ಕರೆ ತಂದಿದ್ದರು.
ವಿಜಯಕುಮಾರ್ ಹಾಕಿಕೊಳ್ಳುತ್ತಿದ್ದ ಚಿನ್ನದ ಒಡವೆಗಳ ಮೇಲೆ ಕಣ್ಣಿಟ್ಟಿದ್ದ ವಿಕ್ರಂ & ಸಚಿನ್
ಇಬ್ಬರು ನಿನ್ನೆ ರಾತ್ರಿ ವಿಜಯಕುಮಾರ‌್‌ಗೆ ಕರೆ ಮಾಡಿ ನಮಗೆ ಹುಷಾರಿಲ್ಲ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ಹೇಳಿದ್ದಾರೆ. ವಿಜಯಕುಮಾರ್ ಕಟ್ಟಡದ ಬಳಿ ಬರುತ್ತಿದ್ದಂತೆ ಕಬ್ಬಿಣ ರಾಡ್ ಮತ್ತು ಸಿಲಿಂಡರ್‌ನಿಂದ ಹಲ್ಲೆ ಮಾಡಿ ಆರೋಪಿಗಳಿಬ್ಬರು ಕೊಲೆ ಮಾಡಿದ್ದಾರೆ.
ನಂತರ ವಿಜಯ್‌ಕುಮಾರ್ ಮೈಮೇಲಿದ್ದ ಒಂದು ಚಿನ್ನದ ಸರ, ಮೂರು ಉಂಗುರ, ಮೊಬೈಲ್ ಹಾಗೂ ಹಣ ಕಸಿದುಕೊಂಡು ಒಂದು ಬೆರಳಿನಲ್ಲಿ ಉಂಗುರ ಬರಲಿಲ್ಲ ಎಂದು ಬೆರಳನ್ನೇ ತುಂಡರಿಸಿ ಬೆರಳು ಸಮೇತ ಚಿನ್ನದ ಉಂಗುರ ಹೊತ್ತೊಯ್ದಿರುವ ಆರೋಪಿಗಳು ಇದೀಗ ಪರಾರಿಯಾಗಿದ್ದಾರೆ.
ಅರಸೀಕೆರೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.