ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಕಮಲ್ ಹಾಸನ್ ಅವರ ಕನ್ನಡ ಭಾಷೆಯ ಕುರಿತ ವಿವಾದಿತ ಹೇಳಿಕೆಯನ್ನು ಬಹುಭಾಷಾ ನಟ ಕಿಶೋರ್ ಸಮರ್ಥಿಸಿಕೊಂಡಿದ್ದಾರೆ.
ಕಮಲ್ ಹಾಸನ್ ಹೇಳಿಕೆಯನ್ನು ಭಾವುಕವಾಗಿ ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದಿದ್ದಾರೆ.
ನನ್ನ ತಾಯಿಯ ಹೊಟ್ಟೆಯಿಂದ ನಾನು ಹುಟ್ಟಿ ಬಂದೆ ಎಂದರೆ, ಅದು ನನಗೆ ಹಾಗೂ ನನ್ನ ತಾಯಿಗೆ ಅವಮಾನವಲ್ಲವಲ್ಲ. ಅದನ್ನು ಅವಹೇಳನಕಾರಿ ಎಂದು ಯಾಕೆ ಅಂದುಕೊಳ್ಳಬೇಕು? ತುಂಬಾ ತಿಳಿದಂತಹ ಮನುಷ್ಯ ಏನೋ ಹೇಳಿದ್ದಾರೆ ಎಂದರೆ, ಅದಕ್ಕೆ ಒಂದು ತರ್ಕ ಇರುತ್ತೆ. ಅದೇನೆಂದು ಅವರನ್ನು ಕೇಳಿ ತಿಳಿದುಕೊಳ್ಳಬೇಕು ಎಂದರು.
ಎಲ್ಲಾ ಭಾಷೆಗಳು ಎಲ್ಲಿಂದಲೋ ಹುಟ್ಟಿ ಬಂದಿರುತ್ತವೆ. ಹಾಗಂತ ಒಂದು ಭಾಷೆ ಮೇಲು-ಕೀಳು ಎಂಬುದಿಲ್ಲ. ಕನ್ನಡವು ಎಲ್ಲಿಂದಲೋ ಹುಟ್ಟಿ ಬಂದಿದೆ, ಹಾಗೆಯೇ ತಮಿಳು ಕೂಡ ಎಲ್ಲಿಂದಲೋ ಹುಟ್ಟಿ ಬಂದಿದೆ. ಭಾವುಕವಾಗಿ ಜನರನ್ನು ರೊಚ್ಚಿಗೆಬ್ಬಿಸಬಾರದು. ಈಗಾಗಲೇ ನಮ್ಮಲ್ಲಿ ಭಾಷೆ, ಜಾತಿ, ಧರ್ಮ ಎಲ್ಲವನ್ನೂ ಬಂಡವಾಳ ಮಾಡಿಕೊಂಡು ರಾಜಕೀಯ ಮಾಡಿಕೊಂಡಿದ್ದಾರೆ. ಭಾಷೆಯನ್ನು ಭಾವುಕತೆಯಿಂದ ನೋಡದೆ, ಭಾಷೆಯನ್ನು ಭಾಷೆಯಾಗಿ ನೋಡಿ ಎಂದರು.
ಕಮಲ್ ಹಾಸನ್ ಅವರ ಹೇಳಿಕೆಯನ್ನು ಒಂದು ಸಿದ್ಧಾಂತ (ಥಿಯರಿ) ಎಂದು ಪರಿಗಣಿಸಬೇಕು. ಒಬ್ಬ ತಿಳಿದ ಮನುಷ್ಯ ಏನೋ ಹೇಳಿದ್ದಾನೆ ಎಂದರೆ, ಏನು ಎಂದು ಕೇಳಿ ಅರ್ಥ ಮಾಡಿಕೊಳ್ಳಬೇಕು. ಅವರ ಹೇಳಿಕೆಯಿಂದ ಯಾರಿಗೂ ಅವಮಾನವಾಗಿಲ್ಲ. ತಮಿಳಿನಿಂದ ಕನ್ನಡ ಬಂದಿದ್ದರೆ ಸರಿ. ಭಾಷೆಗಳ ಬಗ್ಗೆ ಬಹಳಷ್ಟು ಸಿದ್ಧಾಂತಗಳಿವೆ. ಒಂದೊಂದು ಭಾಷೆ ಎಲ್ಲಿಂದ ಬಂತು ಎಂದು ನಿಖರವಾದ ಮಾಹಿತಿ ಸಿಕ್ಕಿಲ್ಲ. ಈ ಬಗ್ಗೆ ಇನ್ನೂ ಸಂಶೋಧನೆಗಳು ನಡೆಯುತ್ತಿವೆ. ಒಂದು ಭಾಷೆಯಿಂದ ಇನ್ನೊಂದು ಭಾಷೆ ಬಂದಿದೆ ಎಂದರೆ, ಅದನ್ನು ಅವಮಾನ ಎಂದು ಯಾಕೆ ಭಾವಿಸಬೇಕು? ಕಮಲ್ ಹಾಸನ್ ಹೇಳಿರೋದು ಸಹ ಒಂದು ಸಿದ್ಧಾಂತವಿರಬಹುದು. ಅವರ ಸಿದ್ಧಾಂತ ಏನೆಂದು ತಿಳಿದುಕೊಳ್ಳೋಣ. ನನ್ನ ಅಭಿಪ್ರಾಯದಲ್ಲಿ ಇದು ಅವಮಾನವಲ್ಲ ಎಂದು ಕಿಶೋರ್ ಸ್ಪಷ್ಟಪಡಿಸಿದರು.