ಹೊಸ ದಿಗಂತ ವರದಿ,ಕಾರವಾರ :
ಮುಂಗಾರು ಪೂರ್ವದ ಮಳೆಯಿಂದ ಹಾಗೂ ಮುಂಗಾರು ಮಳೆಯ ಪ್ರಾರಂಭದ ಹಿನ್ನೆಲೆಯಲ್ಲಿ ಸಮುದ್ರ ಹಾಗೂ ನದಿಗಳಲ್ಲಿ ನೀರಿನ ಹೆಚ್ಚಳದಿಂದ ಬೃಹತ್ ಅಲೆಗಳು ಬರುತ್ತಿದ್ದು ಮತ್ತು ನದಿಗಳು ಅಪಾಯದ ಮಟ್ಟದಲ್ಲಿ ವೇಗವಾಗಿ ಹರಿಯುತ್ತಿರುವುದರಿಂದ ಪ್ರವಾಸಿಗರ ಸುರಕ್ಷತೆಯ ಹಿತದೃಷ್ಟಿಯಿಂದ ಉತ್ತರ ಕನ್ನಡ ಜಿಲ್ಲೆಯ ಕಡಲತೀರ, ನದಿ ಹಾಗೂ ನದಿತೀರಗಳಲ್ಲಿ ಪ್ರವಾಸಿ ಬೋಟಿಂಗ್ ಚಟುವಟಿಕೆ ನಡೆಸುವುದು ಸೂಕ್ತವಲ್ಲದ ಕಾರಣ ಜಿಲ್ಲೆಯ ಸಮುದ್ರತೀರ, ನದಿತೀರ ಹಾಗೂ ನದಿಗಳಲ್ಲಿ ಬೋಟಿಂಗ್ ಹಾಗೂ ಜಲಸಾಹಸ ಕ್ರೀಡೆಗಳನ್ನು ಸೆ. 30 ರವರೆಗೆ ಸಾರ್ವಜನಿಕ ಹಾಗೂ ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ನಿಷೇಧಿಸಲಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮಿ ಪ್ರಿಯ ತಿಳಿಸಿದ್ದಾರೆ.
ಸಪ್ಟೆಂಬರ್ 30 ರ ನಂತರ ಬೋಟಿಂಗ್ ಚಟುವಟಿಕೆಗಳನ್ನು ಪ್ರಾರಂಭಿಸುವ ಬಗ್ಗೆ ಜಿಲ್ಲಾಧಿಕಾರಿ ಕಛೇರಿಯಿಂದ ಸೂಕ್ತ ನಿರ್ದೇಶನ ನೀಡಲಾಗುವುದು. ಅನಧಿಕೃತವಾಗಿ ಬೋಟಿಂಗ್ ಚಟುವಟಿಕೆ ಕೈಗೊಂಡಲ್ಲಿ ಸದರಿ ಬೋಟ್ ಮಾಲೀಕರನ್ನು ನೀಡಿದ ಪರವಾನಿಗೆಯನ್ನು ರದ್ದು ಪಡಿಸಿ ಕಪ್ಪು ಪಟ್ಟಿಗೆ ಸೇರಿಸಲು ಕ್ರಮ ಕೈಗೊಳ್ಳಲಾಗುವುದು ಹಾಗೂ ಪ್ರಮುಖ ಕಡಲತೀರ / ನದಿತೀರಗಳಲ್ಲಿ ಪೊಲೀಸ್ ಇಲಾಖೆಯಿಂದ ಗಸ್ತು ಸಿಬ್ಬಂದಿ ನಿಯೋಜಿಸಲಾಗುವುದು ಎಂದು ತಿಳಿಸಿದ್ದಾರೆ.