ಭಯೋತ್ಪಾದನೆ ವಿರುದ್ದದ ಭಾರತದ ನಿಯೋಗದ ಅಭಿಯಾನ ಯಶಸ್ವಿಯಾಗಿ ಪೂರ್ಣ: ಎಲ್ಲೆಡೆ ಸಿಕ್ಕಿತು ನಿರೀಕ್ಷೆಗೂ ಮೀರಿದ ಸ್ಪಂದನೆ!

ಹೊಸ ದಿಗಂತ ಡಿಜಿಟಲ್ ಡೆಸ್ಕ್: 

ಅಪರೇಷನ್ ಸಿಂದೂರ್ ಬಳಿಕ ಭಾರತದ ರಾಜತಾಂತ್ರಿಕ ಪ್ರಯತ್ನಗಳ ಮಹತ್ವದ ಭಾಗವಾಗಿ ಭಯೋತ್ಪಾದನೆಯ ವಿರುದ್ಧದ ಶೂನ್ಯ ಸಹಿಷ್ಣುತೆ ದೃಢ ನಿಲುವು ಸ್ಪಷ್ಟಪಡಿಸಲು ಹಾಗೂ ಅಂತಾರಾಷ್ಟ್ರೀಯ ಸಹಕಾರ ಬಲಪಡಿಸುವ ನಿಟ್ಟಿನಲ್ಲಿ ಸಂಸದೆ ಕನಿಮೋಳಿ ನೇತೃತ್ವದ ಸರ್ವಪಕ್ಷಗಳ ನಿಯೋಗವು ತನ್ನ ವಿದೇಶ ಭೇಟಿ ಯಶಸ್ವಿಯಾಗಿ ಪೂರ್ಣಗೊಳಿಸಿದೆ.

ಪಾಕಿಸ್ತಾನ ಪ್ರೇರಿತ ಭಯೋತ್ಪಾದನೆ ವಿರುದ್ದ ಜಾಗತಿಕವಾಗಿ ಗಮನ ಸೆಳೆಯುವ ಭಾರತದ ಅಭಿಯಾನದ ಪ್ರಯುಕ್ತ ನಿಯೋಗ ಐದು ರಾಷ್ಟ್ರಗಳ ಭೇಟಿಯ ಅಂತಿಮ ಹಂತವಾಗಿ ಸ್ಪೇನ್ ನ ಮ್ಯಾಡ್ರಿಡ್‌ನಲ್ಲಿ ಮಹಾತ್ಮ ಗಾಂಧಿ ಪ್ರತಿಮೆಗೆ ಗೌರವ ಸಲ್ಲಿಸುವುದರೊಂದಿಗೆ ಆರಂಭಿಸಿತ್ತು. ಮೊದಲ ದಿನ ಸ್ಪೇನ್‌ನಲ್ಲಿರುವ ಭಾರತೀಯ ಸಮುದಾಯದೊಂದಿಗೆ ಸಂವಾದ ನಡೆಸಿದೆ. ಮುಂಬೈ ಭೀಕರ ಉಗ್ರ ದಾಳಿಯಲ್ಲಿ ಬದುಕುಳಿದಿರುವ ಸ್ಪ್ಯಾನಿಷ್ ಉದ್ಯಮಿ ಆರ್ಟುರೊ ಫೆರ್ನಾಂಡಿಸ್ ಅಲ್ವಾರೆಜ್ ಅವರು ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆ ಖಂಡಿಸುವಲ್ಲಿ ನಿಯೋಗದ ಜೊತೆಯಾಗಿದ್ದರು.

ಭೇಟಿಯ ಕೊನೆಯ ದಿನದಂದು ಯುರೋಪ್ ಕೌನ್ಸಿಲ್‌ನ ಪಾರ್ಲಿಮೆಂಟರಿ ಅಸೆಂಬ್ಲಿಯ ಉಪಾಧ್ಯಕ್ಷ ಆಂಟೋನಿಯೊ ಗುಟೈರೆಜ್ ಲಿಮೋನ್ಸ್ ನೇತೃತ್ವದ ಸೆನೆಟ್ ವಿದೇಶಾಂಗ ವ್ಯವಹಾರಗಳ ಸಮಿತಿ ಹಾಗೂ ಭಯೋತ್ಪಾದನೆ ಪೀಡಿತ 4,800ಕ್ಕೂ ಹೆಚ್ಚು ಸಂತ್ರಸ್ತರೊಂದಿಗೆ ನಿಂತಿರುವ ಸಂಘಟನೆ ಅಸೋಸಿಯಾಸಿಯನ್ ಡಿ ವಿಕ್ಟಿಮಾಸ್ ಡೆಲ್ ಟೆರರಿಸೊ ಹಾಗೂ ಸ್ಪ್ಯಾನಿಷ್ ಸರ್ಕಾರದ ಸದಸ್ಯರು, ಸಂಸದರು ಮತ್ತು ನಾಗರಿಕ ಸಮಾಜದ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿದೆ.

ಲಾಟ್ವಿಯಾ ಭೇಟಿ:
ಸ್ಪೇನ್ ಭೇಟಿಗೂ ಮುನ್ನ ನಿಯೋಗವು ಲಾಟ್ವಿಯಾಕ್ಕೆ ತೆರಳಿದ್ದು, ಅಲ್ಲಿ ಸಯೀಮಾ(ಲಾಟ್ವಿಯಾ ಗಣರಾಜ್ಯದ ಸಂಸತ್ತು)ದ ವಿದೇಶಾಂಗ ವ್ಯವಹಾರಗಳ ಸಮಿತಿ ಅಧ್ಯಕ್ಷೆ ಎಚ್.ಇ. ಇನಾರಾ ಮುರ್ನಿಸ್ , ಭಾರತದೊಂದಿಗೆ ಸಂಸದೀಯ ಸಹಕಾರ ಉತ್ತೇಜಿಸುವ ಸಯೀಮಾ ಸದಸ್ಯರ ಗುಂಪಿನ ಅಧ್ಯಕ್ಷೆ ಎಚ್.ಇ. ಇಂಗ್ರಿಡಾ ಸಿರ್ಸೆನೆ ಹಾಗ ಸಮಿತಿಗಳ ಸದಸ್ಯರು, ಸಯೀಮಾ ಹಿರಿಯ ಅಧಿಕಾರಿಗಳು, ಲ್ಯಾಟ್ವಿಯನ್ ಕಡೆಯಿಂದ ಬಾಲ್ಟಿಕ್ ಅಸೆಂಬ್ಲಿ ಪ್ರತಿನಿಧಿಗಳೊಂದಿಗೂ ಅತ್ಯಂತ ಫಲಪ್ರದ ಸಂವಾದ ನಡೆಸಿದೆ. ಅಲ್ಲದೆ, ವಿದೇಶಾಂಗ ವ್ಯವಹಾರಗಳ ಸಚಿವಾಲಯದ ರಾಜ್ಯ ಕಾರ್ಯದರ್ಶಿ ಆಂಡ್ರೆಜ್ಸ್ ವಿಲುಮ್ಸನ್ಸ್ ಮತ್ತು ಲ್ಯಾಟ್ವಿಯಾದ UNSC ಕ್ಯಾಂಡಿಡಸಿ 2026-27ರ ವಿಶೇಷ ರಾಯಭಾರಿ ಹಾಗೂ ಅಂತಾರಾಷ್ಟ್ರೀಯ ಸಂಸ್ಥೆಗಳು ಮತ್ತು ಮಾನವ ಹಕ್ಕುಗಳ ವಿಭಾಗದ ನಿರ್ದೇಶಕರಾದ ರಾಯಭಾರಿ ಆಂಡ್ರೆಜ್ಸ್ ಪಿಲ್ಡೆಗೋವಿಕ್ಸ್ ಅವರನ್ನೂ ಭೇಟಿ ಮಾಡಿದೆ.

ಲಾಟ್ವಿಯಾ ರಿಗಾದಲ್ಲಿ ಭಾರತವು 2024ರ ಜುಲೈನಲ್ಲಿ ರಾಯಭಾರ ಕಚೇರಿ ತೆರೆದಿದ್ದು, ಇದರ ನಂತರ ಭಾರತದಿಂದ ಲಾಟ್ವಿಯಾಕ್ಕೆ ಭೇಟಿ ಕೊಟ್ಟ ಮೊದಲ ಉನ್ನತ ಮಟ್ಟದ ನಿಯೋಗ ಇದಾಗಿದ್ದು, ಉಭಯ ದೇಶಗಳ ರಾಜತಾಂತ್ರಿಕರ ಈ ಭೇಟಿ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!