ಹೊಸದಿಗಂತ ವರದಿ ಅಂಕೋಲಾ :
ಆಪರೇಷನ್ ಸಿಂಧೂರ ಭಯೋತ್ಪಾದನೆ ಮತ್ತು ಅದರ ಪ್ರಾಯೋಜಕರ ವಿಷಯದಲ್ಲಿ ಭಾರತ ಶೂನ್ಯ ಸಹಿಷ್ಟುತೆ ಹೊಂದಿದೆ ಎಂಬ ಸಂದೇಶವನ್ನು ಜಗಕ್ಕೆ ನೀಡಿದೆ ಎಂದು ಭಾಜಪಾ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಹೇಳಿದರು.
ಇವರು ಶುಕ್ರವಾರ ರಾಷ್ಟ್ರರಕ್ಷಣೆಗಾಗಿ ನಾಗರಿಕರು ವೇದಿಕೆಯಿಂದ ಏರ್ಪಡಿಸಲಾಗಿದ್ದ ಆಪರೇಷನ್ ಸಿಂದೂರ್ ಕುರಿತಾದ ವಿಚಾರ ಸಂಕಿರಣವನ್ನು ಭಾರತ ಮಾತೆಗೆ ಪುಷ್ಪಾ ರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಕೇಂದ್ರ ಸರ್ಕಾರ ಕಾಶ್ಮೀರದಲ್ಲಿ ಸಹಜಸ್ಥಿತಿ ನಿರ್ಮಿಸಲು ನಡೆಸಿದ ಪ್ರಯತ್ನ ಮತ್ತು ಅದಕ್ಕೆ ಸಿಗುತ್ತಿದ್ದ ವ್ಯಾಪಕ ಬೆಂಬಲವನ್ನು ಘಾಸಿಗೊಳಿಸಲು ಪಾಕ್ ಪ್ರೇರಿತ ಶಕ್ತಿಗಳು ನಡೆಸಿದ ದುಷ್ಕೃತ್ಯ ಪಹ್ಲಾಮ್ ದುರ್ಘಟನೆಯಾಗಿದೆ .370 ನೇ ವಿಧಿ ರದ್ದತಿಯ ನಂತರದಲ್ಲಿ ನಡೆದ ಶಾಂತಿಯುತ ಚುನಾವಣೆ, ಅಭಿವೃದ್ಧಿ ಕಾರ್ಯಗಳು , ಪ್ರವಾಸಿಗರ ಸಂಖ್ಯೆ ಹೆಚ್ಚಳದಿಂದ ಕಾಶ್ಮೀರ ಸಹಜ ಸ್ಥಿತಿಗೆ ಬರತೊಡಗಿತ್ತು. ಕಾಶ್ಮೀರಿಗಳು ಭಾರತಕ್ಕೆ ನಿಧಾನ ಹೊಂದಿಕೊಳ್ಳುತ್ತಿರುವುದನ್ನು ನೋಡಿ ಈ ಸ್ಥಿತಿ ಘಾಸಿ ಮಾಡಲು ಈ ಹತ್ಯಾಕಾಂಡ ನಡೆಸಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಕ್ಷೇತ್ರಶಿಕ್ಷಣಾಧಿಕಾರಿ ನಾಗರಾಜ ನಾಯಕ ಮಾತನಾಡಿ,ಪಹಲ್ಗಾಮ್ ನಲ್ಲಿ ನಡೆದ 26 ಜನ ಅಮಾಯಕರ ಹತ್ಯಾಕಾಂಡ ಅತ್ಯಂತ ಬರ್ಬರ ಕೃತ್ಯ. ಆಪರೇಷನ್ ಸಿಂಧೂರ್ ಯಾಕೆ ಮತ್ತು ಇದರಿಂದ ಏನಾಯ್ತು ಎನ್ನುವುದು ಇಡೀ ಜಗತ್ತಿಗೆ ಅರ್ಥವಾಗಿದೆ.ಇಡೀ ದೇಶ ಈ ದುರಂತದ ವಿರುದ್ಧ ಸಂಘಟಿತವಾಗಿ ಎದ್ದು ನಿಂತಿದ್ದು ಅಭೂತಪೂರ್ವ. ಕೇಂದ್ರ ಸರ್ಕಾರ ವಿದೇಶಕ್ಕೆ ಕಳಿಸಿದ ನಿಯೋಗ ಭಾರತದ ನಿಲುವನ್ನು ಅತ್ಯಂತ ಸಮರ್ಥವಾಗಿ ಪ್ರತಿಪಾದನೆ ಮಾಡುತ್ತಿದ್ದಾರೆ. ಇವರೆಲ್ಲರನ್ನು ನೋಡಿ ವಿದೇಶಕ್ಕೆ ಹೋದಾಗಲೆಲ್ಲ ದೇಶದ ಮಾನ ಮರ್ಯಾದೆ ತೆಗೆಯುವವರು ನೋಡಿ ಕಲಿಯಬೇಕು ಎಂದರು.
ವಿಶ್ರಾಂತ ಸೈನಿಕ ಕೃಷ್ಣಾನಂದ ಸುಧಾಕರ ದಾಮುದ್ಲೇಕರ್ ಮಾತನಾಡಿದರು. ಪ್ರಾರಂಭದಲ್ಲಿ ಮಹೇಶ ಮಹಾಲೆ ವಂದೇ ಮಾತರಂ ಹಾಡಿದರು. ರಾಷ್ಟ್ರ ರಕ್ಷಣಾ ವೇದಿಕೆ ಅಧ್ಯಕ್ಷ ಎನ್.ಎಸ್.ಹೆಗಡೆ ಸ್ವಾಗತಿಸಿದರು.
ಪ್ರಶಾಂತ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ, ಶಾಸಕ ದಿನಕರ ಶೆಟ್ಟಿ, ಮಾಜಿ ಸಚಿವ ಶಿವಾನಂದ ನಾಯ್ಕ, ಮಾಜಿ ಶಾಸಕ ಸುನೀಲ ಹೆಗಡೆ, ಪ್ರಮುಖರಾದ ನಾಗರಾಜ ನಾಯಕ, ಗೋವಿಂದ ನಾಯ್ಕ , ಕೆ.ಜಿ.ನಾಯ್ಕ, ಭಾಸ್ಕರ ನಾರ್ವೇಕರ್ , ಸಾಹಿತಿಗಳಾದ ವಿಠ್ಠಲ ಗಾಂವಕರ ಮಹಾಂತೇಶ ರೇವಡಿ, ನಿವೃತ್ತ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.