ಹೊಸದಿಗಂತ ಡಿಜಿಟಲ್ ಡೆಸ್ಕ್:
ಗದಗ ಮತ್ತು ಕೊಪ್ಪಳ ಜಿಲ್ಲೆಗಳ ಗಡಿಭಾಗ ಯರೇಹಂಚಿನಾಳ್ ಗ್ರಾಮದ ರೈತ ಮಹಿಳೆಯೊಬ್ಬರು ಕೂಡಿಟ್ಟ ಗೃಹಲಕ್ಷ್ಮಿ ಹಣದಲ್ಲಿ ರಸ್ತೆ ಬದಿಯ ಮುಳ್ಳು, ಪೊದೆಗಳನ್ನು ತೆರವುಗೊಳಿಸಲು ಬಳಸಿದ್ದಾರೆ.
ಹಲವು ಮಹಿಳೆಯರು ಸರ್ಕಾರ ಪ್ರತಿ ತಿಂಗಳು ನೀಡುವ ರೂ. 2 ಸಾವಿರ ಕೂಡಿಟ್ಟು ಚಿನ್ನ ಖರೀದಿಸಿದರೆ, ಕೆಲವರು ಬೋರ್ ವೆಲ್ ಕೊರೆಸಿದ್ದಾರೆ. ಆದರೆ ಸವಿತಾ ನಾಗರೆಡ್ಡಿ ಅವರು 11 ತಿಂಗಳಿಂದ ಕೂಡಿಟ್ಟ ಹಣವನ್ನು ಕೊಪ್ಪಳ ಜಿಲ್ಲೆಯ ಯರೇಹಂಚಿನಾಳದಿಂದ ಕೋಟುಮಚಗಿ ಗ್ರಾಮಗಳವರೆಗೆ ರಸ್ತೆ ಕಾಮಗಾರಿಗೆ ಬಳಸಿದ್ದಾರೆ.
ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿರುವ ಮುಳ್ಳು, ಗಿಡಗಂಟಿ, ಪೊದೆಗಳನ್ನು ತೆರವುಗೊಳಿಸುವಂತೆ ಹಲವು ರೈತರು ಸಂಬಂಧಪಟ್ಟ ಗ್ರಾಮ ಪಂಚಾಯಿತಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಸವಿತಾ ಜೆಸಿಬಿ ಯಂತ್ರಗಳನ್ನು ಬಾಡಿಗೆಗೆ ಪಡೆದು ಕೂಲಿ ಕಾರ್ಮಿಕರಿಗೆ ಕೂಲಿ ನೀಡಿ ಕಾಮಗಾರಿ ಪೂರ್ಣಗೊಳಿಸಲು ನಿರ್ಧರಿಸಿದ್ದಾರೆ. ಅನೇಕ ಗ್ರಾಮಸ್ಥರು ಆಕೆಯ ನಡೆಯನ್ನು ಶ್ಲಾಘಿಸಿದ್ದು, ಈ ದಿಟ್ಟ ಹೆಜ್ಜೆಗೆ ಧನ್ಯವಾದ ಸಲ್ಲಿಸಿದ್ದಾರೆ.
ಇದೇ ರೀತಿಯ ಸಾರ್ವಜನಿಕ ಸೇವೆಗೆ ಗೃಹ ಲಕ್ಷ್ಮಿ ಹಣ ಬಳಸುವುದಾಗಿ ಸವಿತಾ ಹೇಳಿದ್ದಾರೆ. ಸವಿತಾ ಅವರ ಪತಿ ಉಮೇಶ್ ಅವರು ರೈತರಾಗಿದ್ದು, ರಸ್ತೆ ಸರಿಪಡಿಸಲು ರೂ. 22,000 ಬಳಸಲು ಒಪ್ಪಿಗೆ ನೀಡಿದ್ದಾರೆ.