ಹೊಸದಿಗಂತ ವರದಿ ವಿಜಯನಗರ:
ಮಹರ್ಷಿ ವಾಲ್ಮೀಕಿ ನಿಗಮದ ಬಹುಕೋಟಿ ಹಗರಣದ ತನಿಖೆ ಚುರುಕುಗೊಳಿಸಿರುವ ಇಡಿ(ಜಾರಿ ನಿರ್ದೇಶನಾಲಯ) ಅಧಿಕಾರಿಗಳು ಇದೇ ಮೊದಲ ಬಾರಿಗೆ ಕೂಡ್ಲಿಗಿ ಕಾಂಗ್ರೆಸ್ ಶಾಸಕ ಡಾ.ಎನ್.ಟಿ.ಶ್ರೀನಿವಾಸ ಅವರ ಮನೆ ಮೇಲೆ ದಾಳಿ ನಡೆಸಿದ್ದಾರೆ.
ಡಾ.ಶ್ರೀನಿವಾಸ ಅವರ ಹುಟ್ಟೂರು ಕೂಡ್ಲಿಗಿ ತಾಲೂಕಿನ ನರಸಿಂಹಗಿರಿಯಲ್ಲಿರುವ ಮನೆ ಮೇಲೆ ಇಡಿ ದಾಳಿ ನಡೆದಿದೆ. ಬುಧವಾರ ಬೆಳಗ್ಗೆ ೫ ಗಂಟೆ ವೇಳೆಗೆ ಮನೆ ಬಾಗಿಲು ತಟ್ಟಿರುವ ಅಧಿಕಾರಿಗಳು, ಹಗರಣಕ್ಕೆ ಸಂಬAಧಿಸಿ ಮಹತ್ವದ ದಾಖಲೆಗಳಿಗಾಗಿ ಹುಡುಕಾಟ ನಡೆಸಿದ್ದಾರೆ ಎನ್ನಲಾಗಿದೆ.
ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಬೆಳಕಿಗೆ ಬಂದ ಬಳಿಕ ಅಖಂಡ ಬಳ್ಳಾರಿ ಜಿಲ್ಲೆಯ ಕೆಲ ಶಾಸಕರ ಹೆಸರು ಹಗರಣದಲ್ಲಿ ತಳಕು ಹಾಕಿಕೊಂಡಿತ್ತಾದರೂ, ಕೂಡ್ಲಿಗಿ ಶಾಸಕ ಡಾ.ಶ್ರೀನಿವಾಸ ಅವರ ಹೆಸರು ಎಲ್ಲೂ ಪ್ರಸ್ತಾಪಗೊಂಡಿರಲಿಲ್ಲ. ಆದರೆ, ದಿನದಿಂದ ದಿನಕ್ಕೆ ತನಿಖೆ ಚುರುಕುಗೊಳಿಸುತ್ತಿರುವ ಇಡಿ ಅಧಿಕಾರಿಗಳು ಇದೇ ಮೊದಲ ಬಾರಿಗೆ ಶಾಸಕ ಡಾ.ಶ್ರೀನಿವಾಸ ಅವರ ಮನೆ ಮೇಲೆ ದಾಳಿ ನಡೆಸಿದ್ದಾರೆ. ಇದರಿಂದಾಗಿ ವಾಲ್ಮೀಕಿ ನಿಗಮ ಹಗರಣದ ಆರೋಪಿಗಳ ಪಟ್ಟಿಯಲ್ಲಿ ಡಾ.ಶ್ರೀನಿವಾಸ ಹೆಸರು ಹೊಸದಾಗಿ ಸೇರ್ಪಡೆಯಾದಂತಾಗಿದೆ.
ಶಾಸಕ ಡಾ.ಶ್ರೀನಿವಾಸ ಅವರು ನಿನ್ನೆ ಸಂಜೆಯಷ್ಟೇ ಬೆಂಗಳೂರಿಗೆ ತೆರಳಿದ್ದು, ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾಗ ಡಾ.ಶ್ರೀನಿವಾಸ ಅವರ ತಾಯಿ ಮಾತ್ರ ಮನೆಯಲ್ಲಿದ್ದಾರೆ ಎಂದು ತಿಳಿದು ಬಂದಿದೆ.