ಹೊಸದಿಗಂತ ವರದಿ ಬಳ್ಳಾರಿ:
ಅಕ್ರಮ ಗಣಿಗರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಪಾಲಾಗಿದ್ದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರಿಗೆ ತೆಲಂಗಾಣ ಹೈಕೋರ್ಟ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದ ಹಿನ್ನೆಲೆ ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.
ಅಭಿಮಾನಿಗಳು ನಗರದ ಅಹಂಭಾವಿ ರಸ್ತೆಯ ರೆಡ್ಡಿ ಅವರ ನಿವಾಸದ ಎದುರು ಮಂಗಳವಾರ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಜಾಮೀನು ಮಂಜೂರು ಆದೇಶ ಹೋರ ಬೀಳುತ್ತಿದ್ದಂತೆ ಅಭಿಮಾನಿಗಳು, ಬೆಂಬಲಿಗರು ರೆಡ್ಡಿ ಅವರ ನಿವಾಸದ ಬಳಿ ಜಮಾಯಿಸಿ ಪಟಾಕಿ ಸಿಡಿಸಿ ಸಂಭ್ರಮಿಸಿ, ರೆಡ್ಡಿ ಅವರ ಪರ ಘೋಷಣೆಗಳನ್ನು ಕೂಗಿದರು.
ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಗಾವತಿ ಕ್ಷೇತ್ರದ ಶಾಸಕ, ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಗೆ ಸಿಬಿಐ ವಿಶೇಷ ನ್ಯಾಯಾಲಯ 14 ವರ್ಷಗಳ ಸುಧೀರ್ಘ ವಾದ ಪ್ರತಿವಾದಗಳನ್ನು ಆಲಿಸಿ ಇತ್ತೀಚೆಗೆ 7 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿತ್ತು. ಇದನ್ನು ಪ್ರಶ್ನಿಸಿ ರೆಡ್ಡಿ ಅವರು ತೆಲಂಗಾಣ ಹೈಕೋರ್ಟ ಗೆ ಅರ್ಜಿ ಸಲ್ಲಿಸಿದ್ದರು.
ವಾದ ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯ ನಾನಾ ಷರತ್ತುಗಳನ್ನು ವಿಧಿಸಿ, ಸಿಬಿಐ ಆದೇಶವನ್ನು ರದ್ದುಪಡಿಸಿ ಜಾಮೀನು ಮಂಜೂರು ಮಾಡಿದೆ. 10 ಲಕ್ಷ ರೂ. ಇಬ್ಬರ ಜಾಮೀನು ಹಾಗೂ ಅನುಮತಿ ಪಡೆಯದೇ ಭಾರತವನ್ನು ಬಿಟ್ಟು ತೆರಳುವಂತಿಲ್ಲ, ವೀಸಾ ಹಾಗೂ ಪಾಸ್ ಪೋರ್ಟ್ ನ್ಯಾಯಾಲಯಕ್ಕೆ ಹಸ್ತಾಂತರಿಸಬೇಕು ಎಂದು ಷರತ್ತು ವಿಧಿಸಿದೆ. ಸಂಭ್ರಮಾಚರಣೆಯಲ್ಲಿ ಬೆಂಬಲಿಗರಾದ ಮಲ್ಲಿಕಾರ್ಜುನ ಆಚಾರ್ಯ, ಶ್ರೀನಿವಾಸ್ ಸೇರಿದಂತೆ ಇತರರಿದ್ದರು.