ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಾತಿಗಣತಿ ವಿರೋಧಿಸಿದ ಬಿಜೆಪಿ, ಈಗ ಗೊಂದಲ ನಿವಾರಿಸುವ ಸರ್ಕಾರದ ತೀರ್ಮಾನವನ್ನು ವಿರೋಧಿಸುತ್ತಿರುವುದೇಕೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದ್ದಾರೆ.
ನವದೆಹಲಿಯಲ್ಲಿ ಮಾತನಾಡಿದ ಅವರು, ಜಾತಿ ಗಣತಿ ವಿಚಾರವಾಗಿ ಮರು ಸಮೀಕ್ಷೆಗೆ ಮುಂದಾಗಿರುವ ಬಗ್ಗೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿರುವ ಬಗ್ಗೆ ಕೇಳಿದಾಗ, ಜಾತಿ ಗಣತಿ ವರದಿ ವಿರೋಧ ಮಾಡಿದವರು ಅವರಲ್ಲವೇ? ಅವರು ಜಾತಿಗಣತಿ ವರದಿ ಸ್ವೀಕಾರ ಮಾಡಲಿಲ್ಲ ಯಾಕೆ? ಈ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸಿಲ್ಲ. ಈ ವರದಿಯಲ್ಲಿ ಯಾರ ಅಂಕಿ ಅಂಶಗಳು ಬಿಟ್ಟುಹೋಗಿವೆ ಅವರ ಮಾಹಿತಿಯನ್ನು ಸೇರಿಸಲು ಅವಕಾಶ ನೀಡಲಾಗುವುದು. ಈಗಾಗಲೇ ನೀಡಿರುವ ವರದಿಯನ್ನು ನಾವು ಬಳಸಿಕೊಳ್ಳುತ್ತೇವೆ. ಸಮಾಜಗಳಿಗೆ ನ್ಯಾಯ ಒದಗಿಸಬೇಕು, ಗೊಂದಲಗಳನ್ನು ಬಗೆಹರಿಸಲು ನಾವು ಮುಂದಾಗಿದ್ದೇವೆ ಎಂದು ತಿಳಿಸಿದರು.