ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಇಂದು 16ನೇ ಹಣಕಾಸು ಆಯೋಗದ ಸಭೆ ಆಯೋಗದ ಅಧ್ಯಕ್ಷ ಡಾ. ಅರವಿಂದ ಪನಗರಿಯ ಅವರ ಅಧ್ಯಕ್ಷತೆಯಲ್ಲಿ ನಡೆದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಸಭೆಯಲ್ಲಿ ಅವರು ಭಾಗವಹಿಸಿದರು.
ಈ ಸಭೆಯಲ್ಲಿ ಕೇಂದ್ರದಿಂದ ರಾಜ್ಯಗಳಿಗೆ ತೆರಿಗೆ ಹಂಚಿಕೆ ಮತ್ತು ಹಣಕಾಸು ವರ್ಗಾವಣೆಗಳ ಕುರಿತು ರಾಜ್ಯದ ಆಶಯಗಳು, ನಿರೀಕ್ಷೆಗಳು ಮತ್ತು ಪ್ರಸ್ತಾವನೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದರು. ಹೆಚ್ಚುವರಿ ಜ್ಞಾಪಕ ಪತ್ರವನ್ನು ಆಯೋಗಕ್ಕೆ ಸಲ್ಲಿಸುವುದರೊಂದಿಗೆ, ಈ ಜ್ಞಾಪಕ ಪತ್ರದಲ್ಲಿ ನ್ಯಾಯಯುತ, ಪಾರದರ್ಶಕ ಮತ್ತು ಬೆಳವಣಿಗೆಯನ್ನು ಪ್ರೋತ್ಸಾಹಿಸುವ ಮತ್ತು ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸುವ ರಾಜ್ಯದ ದೃಷ್ಟಿಕೋನವನ್ನು ಅವರು ಸ್ಪಷ್ಟಪಡಿಸಿದರು.
ಆಯೋಗವನ್ನುದ್ದೇಶಿಸಿ ಮಾತನಾಡಿದ ಅವರು, ಭಾರತದ ಆರ್ಥಿಕ ಬೆಳವಣಿಗೆಯಲ್ಲಿ ಕರ್ನಾಟಕದ ಪ್ರಮುಖ ಪಾತ್ರವನ್ನು ಒತ್ತಿ ಹೇಳಿದರು. ರಾಜ್ಯವು ದೇಶದ ಒಟ್ಟು ಜಿಡಿಪಿಗೆ ಸುಮಾರು ಶೇಕಡ 8.7ರಷ್ಟು ಕೊಡುಗೆ ನೀಡುತ್ತಿದ್ದು, ಜಿ.ಎಸ್.ಟಿ ಸಂಗ್ರಹಣೆಯಲ್ಲಿ 2ನೇ ಸ್ಥಾನದಲ್ಲಿದೆ. ಈ ಕೊಡುಗೆಯ ಹೊರತಾಗಿಯೂ, ಸಂಪನ್ಮೂಲ ಹಂಚಿಕೆಯಲ್ಲಿ ಉಂಟಾಗಿರುವ ತೀವ್ರ ಅಸಮತೋಲನವನ್ನು ಮುಖ್ಯಮಂತ್ರಿಗಳು ಪ್ರಸ್ತುತ ಪಡಿಸಿದರು. ಕೇಂದ್ರ ಹಾಗೂ ರಾಜ್ಯಗಳ ನಡುವಿನ ಹಂಚಿಕೆಯು ಕನಿಷ್ಠ ಶೇಕಡ 50ಕ್ಕೆ ಹೆಚ್ಚಿಸಬೇಕು ಮತ್ತು ಸೆಸ್‌ಗಳು ಮತ್ತು ಸರ್ಚಾರ್ಜುಗಳು ಶೇಕಡ 5 ಕ್ಕೆ ಮಿತಿಗೊಳಿಸಬೇಕೆಂದು ಪ್ರಸ್ತಾಪಿಸಿದರು.
ಈ ಸಭೆಯಲ್ಲಿ ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಹಣಕಾಸು ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್, ಹಣಕಾಸು ಇಲಾಖೆಯ ಹಿರಿಯ ಅಧಿಕಾರಿಗಳು ಹಾಜರಿದ್ದರು.