ಚಿಕ್ಕೋಡಿಯಲ್ಲಿ ಭೀಕರ ಸರಣಿ ಅಪಘಾತ: ಮೂವರು ಸ್ಥಳದಲ್ಲೇ ಸಾವು, ಮೂವರಿಗೆ ಗಂಭೀರ ಗಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಚಿಕ್ಕೋಡಿ ತಾಲ್ಲೂಕಿನ ಅಥಣಿ ಹೊರವಲಯದಲ್ಲಿ ನಡೆದ ಭೀಕರ ಸರಣಿ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ವಿಜಯಪುರ-ಸಂಕೇಶ್ವರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಈ ಅಪಘಾತದಲ್ಲಿ ಇನ್ನೂ ಮೂವರಿಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತರನ್ನು ಮಹೇಶ ಗಾತಾಡೆ (30), ಶಿವಮ್ ಚೌಹಾನ್ (24) ಮತ್ತು ಸಚಿನ್ ಮಾಳಿ (40) ಎಂದು ಗುರುತಿಸಲಾಗಿದೆ. ಇವರು ಮಹಾರಾಷ್ಟ್ರದ ಮಿರಜ್ ಮತ್ತು ಕೊಲ್ಲಾಪುರ ಮೂಲದವರು ಎಂದು ತಿಳಿದುಬಂದಿದೆ.

ಮೊದಲಿಗೆ ಪಿಕಪ್ ವಾಹನ ಹಾಗೂ ಲಾರಿ ಮಧ್ಯೆ ಅಪಘಾತ ಸಂಭವಿಸಿದೆ. ಅಪಘಾತದ ಹೊಡೆತಕ್ಕೆ ಪಿಕಪ್ ವಾಹನ ನೆಲ ಕಚ್ಚಿದೆ. ಪಿಕಪ್ ವಾಹನದ ಚಾಲಕ ಹಾಗೂ ಕ್ಲೀನರ್​​ ಗಂಭೀರವಾಗಿ ಗಾಯಗೊಂಡು ನರಳಾಡುತ್ತಿದ್ದರು. ಈ ವೇಳೆ ಸ್ಕಾರ್ಪಿಯೋದಲ್ಲಿದ್ದ ಚಾಲಕ ಇಬ್ಬರ ಸಹಾಯಕ್ಕೆ ಬಂದಿದ್ದಾರೆ.

ಸ್ಕಾರ್ಪಿಯೋದಲ್ಲಿದ್ದ ಚಾಲಕ ವಾಹನ ಪಕ್ಕಕ್ಕೆ ಹಾಕಿ ರಸ್ತೆ ದಾಟುವಾಗ ಜೋರಾಗಿ ಬಂದ ಎರ್ಟಿಗಾ ಕಾರು ಆತನಿಗೆ ಡಿಕ್ಕಿ ಹೊಡೆದಿದೆ. ಸಹಾಯಕ್ಕೆ ಬಂದಿದ್ದ ಡ್ರೈವರ್‌ ಗೆ ಡಿಕ್ಕಿ ಹೊಡೆದು ಎರ್ಟಿಗಾ ಕಾರು ಲಾರಿಗೆ ಅಪ್ಪಳಿಸಿದೆ. ಪರಿಣಾಮ ಕಾರಿನಲ್ಲಿ ಇದ್ದ ಇಬ್ಬರೂ ಸಾವನ್ನಪ್ಪಿದರು. ಈ ಮೂಲಕ ಅಪಘಾತದಲ್ಲಿ ಒಟ್ಟು ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಗಾಯಾಳುಗಳನ್ನು ತಕ್ಷಣವೇ ಆಸ್ಪತ್ರೆಗೆ ರವಾನಿಸಲಾಗಿದ್ದು, ಸ್ಥಿತಿ ಗಂಭೀರವಾಗಿದೆ. ಅಥಣಿ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಆರಂಭಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!