ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿನ್ನದ ಬೆಲೆ ಕಳೆದ ಐದು ದಿನಗಳಿಂದ ನಿರಂತರವಾಗಿ ಏರಿಕೆಯಾಗುತ್ತಿದ್ದು, ಇಳಿಕೆ ಲಕ್ಷಣಗಳು ಎಲ್ಲಿಯೂ ಗೋಚರಿಸುತ್ತಿಲ್ಲ. ಜೂನ್ 13 ರಂದು 22 ಕ್ಯಾರಟ್ ಚಿನ್ನದ ಬೆಲೆ 10 ಗ್ರಾಂಗೆ 1,950ರಷ್ಟು ಏರಿಕೆಯಾಗಿದ್ದು, 24 ಕ್ಯಾರಟ್ ಚಿನ್ನವು ಲಕ್ಷದ ಗಡಿಯನ್ನು ದಾಟಿ ತನ್ನ ಏರಿಕೆಯನ್ನು ಮುಂದುವರಿಸಿದೆ.
ಇಂದು ದೇಶದಾದ್ಯಂತ ಚಿನ್ನದ ದರ ಈ ರೀತಿ ಇದೆ:
24 ಕ್ಯಾರಟ್ ಚಿನ್ನ (1 ಗ್ರಾಂ): 10,168
22 ಕ್ಯಾರಟ್ ಚಿನ್ನ (1 ಗ್ರಾಂ): 9,320
ಬೆಳ್ಳಿ (10 ಗ್ರಾಂ): 1,101
ತಜ್ಞರ ಪ್ರಕಾರ ಈ ಬೆಲೆ ಏರಿಕೆಯ ಹಿಂದಿರುವ ಪ್ರಮುಖ ಕಾರಣಗಳಲ್ಲಿ ಮೊದಲನೆಯದು ಇಸ್ರೇಲ್-ಇರಾನ್ ನಡುವಿನ ಗಲಭೆ. ಇಸ್ರೇಲಿ ಇರಾನ್‌ನ ಪರಮಾಣು ಸ್ಥಾವರವನ್ನು ಗುರಿಯಾಗಿಸಿ ದಾಳಿ ಮಾಡಿದ ಬಗ್ಗೆ ವರದಿಯಾಗಿದೆ. ಇದರ ಪರಿಣಾಮ ಜಾಗತಿಕ ಷೇರು ಮಾರುಕಟ್ಟೆಗೆ ಬಿದ್ದಿದೆ.
ಇನ್ನೊಂದು ಕಾರಣ ಅಮೆರಿಕದ ಹಣದುಬ್ಬರದ ಪ್ರಮಾಣ ನಿರೀಕ್ಷೆಗಿಂತ ಕಡಿಮೆಯಾಗಿರುವುದು. ಇದರ ಪರಿಣಾಮವಾಗಿ ಅಮೆರಿಕ ಬಡ್ಡಿದರ ಕಡಿತ ಮಾಡುವ ಸಾಧ್ಯತೆ ಹೆಚ್ಚಾಗಿದೆ. ತಜ್ಞರ ಪ್ರಕಾರ ಬಡ್ಡಿದರಗಳು ಕುಸಿದಾಗ ಚಿನ್ನದ ದರ ಏರಿಕೆ ಕಾಣುತ್ತದೆ.
ಚಿನ್ನದ ಬೆಲೆಯಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ಏರಿಕೆ ಸಂಭವಿಸಬಹುದು ಎಂಬ ನಿರೀಕ್ಷೆಯ ನಡುವೆ, ಬ್ಯಾಂಕ್ ಆಫ್ ಅಮೆರಿಕಾ ಮುಂದಿನ 12 ತಿಂಗಳಲ್ಲಿ ಚಿನ್ನದ ದರ $4,000/ಔನ್ಸ್ (ಸುಮಾರು 3.43 ಲಕ್ಷ) ತಲುಪಬಹುದು ಎಂದು ಅಂದಾಜಿಸಿದೆ.