ಹೊಸದಿಗಂತ ಡಿಜಿಟಲ್ ಡೆಸ್ಕ್:
ಉದ್ಯಮಿ ವಿಜಯ್ ಮಲ್ಯ, ಸುಮಾರು ಒಂಬತ್ತು ವರ್ಷಗಳ ಬಳಿಕ ಮೊದಲ ಬಾರಿಗೆ ಸಾರ್ವಜನಿಕವಾಗಿ ರಾಜ್ ಶಮಾನಿಯ ಪಾಡ್‌ಕಾಸ್ಟ್‌ನಲ್ಲಿ ನಾಲ್ಕು ಗಂಟೆಗಳ ಕಾಲ ಭಾಗವಹಿಸಿ ಹಲವಾರು ಸಂವೇದನಶೀಲ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಮಲ್ಯ, 2016ರಲ್ಲಿ ಭಾರತದಿಂದ ಹೊರಡುವ ಮುನ್ನ ಅಂದಿನ ಹಣಕಾಸು ಸಚಿವ ಅರುಣ್ ಜೇಟ್ಲಿಗೆ ತಾವು ಮಾಹಿತಿ ನೀಡಿದ್ದೆವು ಎಂದು ಬಿಚ್ಚಿಟ್ಟಿರುವ ಹೇಳಿಕೆ ಇದೀಗ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ರಾಜಕೀಯ ಚರ್ಚೆಗೂ ಕಾರಣವಾಗಿದೆ.
ಮಲ್ಯ ಹೇಳಿದಂತೆ, “ನಾನು ಲಂಡನ್‌ಗೆ ಹೋಗುವ ಮುನ್ನ ಅರುಣ್ ಜೇಟ್ಲಿ ಅವರಿಗೆ ಮಾಹಿತಿ ನೀಡಿದ್ದೆ. ನಾನು ವಿಮಾನ ನಿಲ್ದಾಣಕ್ಕೆ ಹೊರಡುವ ಮೊದಲು ದೆಹಲಿಯಲ್ಲಿ ಜೇಟ್ಲಿ ಅವರನ್ನು ಭೇಟಿಯಾಗಿ ಈ ವಿಚಾರ ತಿಳಿಸಿದ್ದೆ.” ಮಲ್ಯ ಈ ಹೇಳಿಕೆಯನ್ನು ಹಿಂದೆಯೂ 2018ರಲ್ಲಿ ನೀಡಿದ್ದರೂ, ಇತ್ತೀಚಿನ ಪಾಡ್‌ಕಾಸ್ಟ್‌ನಲ್ಲಿ ಪುನರಾವೃತ್ತಿ ಮಾಡಿದ ಕಾರಣ, ಈ ವಿಚಾರ ಮತ್ತೊಮ್ಮೆ ಚರ್ಚೆಯ ಕೇಂದ್ರಬಿಂದುವಾಗಿದೆ.
ಈ ಕುರಿತು ಅಂದು ಪ್ರತಿಕ್ರಿಯಿಸಿದ್ದ ದಿವಂಗತ ಅರುಣ್ ಜೇಟ್ಲಿ, “ಮಲ್ಯ ನನ್ನನ್ನು ಭೇಟಿಯಾಗಿ ಯಾವುದೇ ಪ್ರಸ್ತಾಪ ಇಟ್ಟಿಲ್ಲ. ಅವರು ಯಾವುದೇ ಸಮಯವೂ ಅಪಾಯಿಂಟ್‌ಮೆಂಟ್ ಕೇಳಿಲ್ಲ. ಅವರು ರಾಜ್ಯಸಭಾ ಸದಸ್ಯರಾಗಿದ್ದ ಕಾರಣ ಮತ್ತು ಅವರು ಸಾಂದರ್ಭಿಕವಾಗಿ ಸದನಕ್ಕೆ ಹಾಜರಾಗಿದ್ದರಿಂದ, ನಾನು ಸದನದಿಂದ ಹೊರನಡೆದು ನನ್ನ ಕೋಣೆಗೆ ಹೋಗುತ್ತಿದ್ದಾಗ, ತಮ್ಮ ಸವಲತ್ತನ್ನು ದುರುಪಯೋಗಿಸಿಕೊಂಡು ನನ್ನ ಬಳಿ ಬಂದಿದ್ದರು” ಎಂದು 2018ರಲ್ಲಿ ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ ಸ್ಪಷ್ಟನೆ ನೀಡಿದ್ದರು.
ಮಲ್ಯ, ಪಾಡ್‌ಕಾಸ್ಟ್‌ನಲ್ಲಿ ತಾವು ಆ ವೇಳೆಯ ಹಣಕಾಸು ಸಚಿವರನ್ನು ನೇರವಾಗಿ ಭೇಟಿಯಾಗಿ, ಲಂಡನ್ ಪ್ರವಾಸದ ಕುರಿತು ಹೇಳಿದರು ಎಂಬ ವಿಷಯ ಇಂದಿಗೂ ಸರಕಾರದ ಮತ್ತು ನ್ಯಾಯಾಂಗ ವ್ಯವಸ್ಥೆಯ ಲೋಪದ ನಿರೂಪಣೆಯಂತೆ ಚರ್ಚೆಯಾಗುತ್ತಿದೆ. ಕಾಂಗ್ರೆಸ್‌ನ ಕೆಲವು ನಾಯಕರೂ ಇದನ್ನು ಕುರಿತು ಆಕ್ಷೇಪ ವ್ಯಕ್ತಪಡಿಸಿ, ಜೇಟ್ಲಿ – ಮಲ್ಯ ನಡುವಿನ ಸಂವಾದ ಏಕೆ ಸತತವಾಗಿ ತಿರಸ್ಕೃತವಾಗುತ್ತಿದೆ ಎಂಬ ಪ್ರಶ್ನೆ ಎತ್ತಿದ್ದಾರೆ.
ಸದ್ಯ ಮಲ್ಯ ನೀಡಿದ ಹೊಸ ಹೇಳಿಕೆ ಮತ್ತೊಮ್ಮೆ ತೀವ್ರ ರಾಜಕೀಯ ತಿರುವಿಗೆ ಕಾರಣವಾಗಿದ್ದು, ಈ ಕುರಿತು ಮತ್ತೆ ಸತ್ಯ ಬೆಳಕಿಗೆ ಬರಬೇಕೆಂಬ ಒತ್ತಡ ಹೆಚ್ಚುತ್ತಿದೆ.