ಹೊಸದಿಗಂತ ಡಿಜಿಟಲ್ ಡೆಸ್ಕ್:
ಎರಡೂ ದಶಕಗಳ ಸಿನಿ ಪ್ರಯಾಣವಿದ್ದರೂ ಕೂಡ, ಸಿನಿಮಾ ಕ್ಷೇತ್ರದಲ್ಲಿ ಒಂದು ಬಂಪರ್ ಹಿಟ್ ನ ನಿರೀಕ್ಷೆಯಲ್ಲೇ ಉಳಿದಿದ್ದ ನಟ ವಿನೋದ್ ಪ್ರಭಾಕರ್. ತಂದೆ ಟೈಗರ್ ಪ್ರಭಾಕರ್ ಅವರ ಮ್ಯಾನರಿಸಮ್, ಬಾಡಿ ಲ್ಯಾಂಗ್ವೇಜ್, ಧೈರ್ಯ ಇವೆಲ್ಲವನ್ನೂ ತಾನು ತನ್ನದೇ ಶೈಲಿಯಲ್ಲಿ ತೋರಿಸಿದ್ರೂ ಕೂಡ, ಯಶಸ್ಸು ಮಾತ್ರ ದೂರವಾಗಿತ್ತು. ಆದರೂ ಹಿಂದೇಟು ಹಾಕದೆ, ಕಷ್ಟಪಟ್ಟು ನವಗ್ರಹ, ರಾಬರ್ಟ್ ಚಿತ್ರಗಳಲ್ಲಿ ದರ್ಶನ್ ಜತೆ ಕೆಲಸ ಮಾಡಿ ಒಂದು ಛಾಪು ಮೂಡಿಸಿದ್ರು.
ಇದೀಗ ತಮ್ಮದೇ ನಾಯಕತ್ವದ ‘ಮಾದೇವ’ ಚಿತ್ರದ ಮೂಲಕ ತಾವು ತಕ್ಕ ಮಟ್ಟಿಗೆ ಗೆದ್ದಿದ್ದಾರೆ ಎನ್ನಿಸುವಂತಹ ಚಲನಚಿತ್ರವನ್ನು ಪ್ರೇಕ್ಷಕರ ಮುಂದೆ ತಂದಿದ್ದಾರೆ. ನವೀನ್ ರೆಡ್ಡಿ ನಿರ್ದೇಶನದಲ್ಲಿ ಭಾವುಕತೆ, ಕಥೆಯ ಗಟ್ಟಿತನ, ಭರವಸೆಯ ಹಾದಿ ಎಲ್ಲವನ್ನೂ ಹೊಂದಿರುವ ಈ ಚಿತ್ರ ನಿಶಬ್ದವಾಗಿ ಬಿಡುಗಡೆಯಾದರೂ, ಮೌತ್ ಪಬ್ಲಿಸಿಟಿ ಮೂಲಕ ಯಶಸ್ಸು ಕಾಣುತ್ತಿದೆ.
ಇದೇ ವರ್ಷ ಬಿಡುಗಡೆಯಾದ ಕೆಲವೇ ಚಿತ್ರಗಳು 1 ಕೋಟಿ ಕ್ಲಬ್ ಸೇರಿರುವ ಈ ಸಂಕಷ್ಟದ ಕಾಲದಲ್ಲಿ ಮಾದೇವ ಎರಡನೇ ವಾರಕ್ಕೆ ಕಾಲಿಟ್ಟಿದ್ದು, ಈಗಾಗಲೇ 2.5 ಕೋಟಿಯ ವರೆಗೆ ಬಾಕ್ಸ್ ಆಫೀಸ್ ಕಲೆಕ್ಷನ್ ಗಳಿಸಿರುವುದೊಂದು ಸಾಧನೆಯೇ ಸರಿ. ಪತ್ನಿ ನಿಶಾ ವಿನೋದ್ ಅವರೂ ಚಿತ್ರ ನೋಡಿ ಕಣ್ಣೀರಿಟ್ಟಿದ್ದಾರೆ ಎನ್ನುವುದು ಈ ಚಿತ್ರದ ಭಾವನಾತ್ಮಕ ಶಕ್ತಿ ಎಷ್ಟಿದೆ ಎಂಬುದರ ಸಾಕ್ಷಿ.
ಒಟ್ಟಿನಲ್ಲಿ, ಪ್ರಾಮಾಣಿಕ ಪ್ರಯತ್ನ ಎಂದಿನಂತೆಯೇ ಫಲ ನೀಡುತ್ತೆ. ವಿನೋದ್ ಪ್ರಭಾಕರ್ ಗೆ ‘ಮಾದೇವ’ ಮುಖಾಂತರ ಹುಟ್ಟಿದ ಮರು ಗೆಲುವು ಎಂದರೆ ತಪ್ಪಾಗಲಾರದು!