ಹೊಸದಿಗಂತ ಡಿಜಿಟಲ್ ಡೆಸ್ಕ್:
ಜೊಯಿಡಾ ತಾಲೂಕಿನ ಕಾತೇಲಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಪ್ಪರ ಕಾನೇರಿ ಜಲಾಶಯ ವ್ಯಾಪ್ತಿಯಲ್ಲಿ ಭಾರಿ ಮಳೆಯಾಗುತ್ತಿದ್ದು ಒಳ ಹರಿವಿನ ಪ್ರಮಾಣ ಏರಿಕೆ ಆಗುತ್ತಿದೆ ಹೀಗೆ ಮಳೆ ಮುಂದುವರೆದಲ್ಲಿ ಜಲಾಶಯ ಗರಿಷ್ಠ ಮಟ್ಟ ತಲುಪಲಿದೆ. ಹೀಗಾಗಿ ಯಾವುದೇ ಸಂದರ್ಭದಲ್ಲಿ ನೀರು ಬಿಡಲಾಗುತ್ತದೆ. ನದಿ ಪಾತ್ರದ ಜನರು ಮುನ್ನೆಚ್ಚರಿಕೆ ವಹಿಸುವಂತೆ ಕಾರ್ಯನಿರ್ವಾಹಕ ಅಭಿಯಂತರರು( ಕಾ) ಸೂಪಾ ಕರ್ನಾಟಕ ವಿದ್ಯುತ್ ನಿಗಮ ಗಣೇಶಗುಡಿ ಎಚ್ಚರಿಕೆ ನೋಟಿಸ್ ನೀಡಿದ್ದಾರೆ.
ಅಪ್ಪರ ಕಾನೇರಿ ಜಲಾಶಯ 615 ಮಿ ಎತ್ತರವಿದೆ. ಈಗಾಗಲೇ 609 ಮಿ ತುಂಬಿದೆ. ಇನ್ನೂ 6 ಮಿ ನೀರು ತುಂಬುವುದು ಬಾಕಿ ಇದೆ. ಜಲಾಶಯದ ಹಿನ್ನೀರಿನಲ್ಲಿ ಭಾರಿ ಮಳೆಯಾಗುತ್ತಿದೆ. ಜಲಾಶಯದ ಕೆಳಗೆ ನದಿ ಪಾತ್ರದ ಜನರು ತಮ್ಮ ಜಾನುವಾರುಗಳೊಂದಿಗೆ ಸುರಕ್ಷಿತ ಸ್ಥಳಗಳಿಗೆ ಹೋಗುವುದು, ದೋಣಿ ಸಂಚಾರ ಮಾಡಬಾರದು, ಮಿನುಗಾರಿಕೆಗೆ ಮಳೆಗಾಲ ಮುಗಿಯುವ ವರೆಗೂ ನೀರಿಗೆ ಇಳಿಯಬಾರದು ಎಂದು ಮುನ್ನೆಚ್ಚರಿಕೆ ಸೂಚನೆಯನ್ನು ನೀಡಿದ್ದಾರೆ.
ಅಪ್ಪರ ಕಾನೇರಿ ಜಲಾಶಯದ ಕೆಳಭಾಗದಲ್ಲಿ ಅಣಶಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾದುಮಳೆ, ಉಳವಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕರ್ಕಣೆ, ಅಂಬೋಳಿ, ನಂದಿಗದ್ದೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾನೇರಿ ಗ್ರಾಮಗಳು ಕಾನೇರಿ ನದಿಯ ದಂಡೆಯ ಮೇಲೆ ಇದೆ. ಕಳೆದ ಮೂರು ವರ್ಷ ಹಿಂದೆ ಅಪ್ಪರ ಕಾನೇರಿ ಜಲಾಶಯದಿಂದ ಭಾರಿ ನೀರು ಬಿಡಲಾಗಿತ್ತು. ಕಾನೇರಿ ಗ್ರಾಮದಲ್ಲಿ ಮನೆಗೆ ಹಾನಿಯಾಗಿತ್ತು ಮತ್ತು ಕೊಟ್ಟಿಗೆ ಮುಳಗಿ ಮೂರು ಜಾನುವಾರಗಳು ಸಾವನ್ನಪ್ಪಿತ್ತು.
ಸೌಲಭ್ಯ ಕಲ್ಪಿಸಿ
ಅಪ್ಪರ ಕಾನೇರಿ ಜಲಾಶಯ ತುಂಬಿದಾಗ ಅದರ ಹಿನ್ನೀರಿನಲ್ಲಿ ಬರುವ ಕುಂಡಲ್ ಸೇತುವೆ ಪ್ರತಿ ವರ್ಷ ಮುಳುಗುತ್ತದೆ. ಘಟ್ಟಾವ ಗ್ರಾಮ ಪ್ರತಿವರ್ಷ ನೀರು ತುಂಬಿ ನಡುಗಡ್ಡೆ ಯಾಗುತ್ತದೆ. ಕೆಲೋಲಿ, ಆದಗಾಂವ, ದೇವಸ್, ಸೇತುವೆ ಇಲ್ಲದೇ ನಡುಗಡ್ಡೆ ಯಾಗುತ್ತದೆ. ಕುಂಡಲ್ ಸೇತುವೆ ಮುಳುಗುವ ಹಂತ ತಲುಪಿದ್ದರಿಂದ ಸಂಪರ್ಕ ಕಡಿತವಾಗುವ ಬಗ್ಗೆ ಕುಂಡಲ್, ಕುರಾವಲಿ, ನವರ ಗ್ರಾಮಸ್ಥರು ಆತಂಕದಲ್ಲಿ ಇದ್ದಾರೆ.