ರಾಮನಗುಳಿ ರಾಷ್ಟ್ರೀಯ ಹೆದ್ದಾರಿ ಬಳಿ ಗುಡ್ಡಕುಸಿತ.. ಸ್ಥಳಕ್ಕೆ ಭೂವಿಜ್ಞಾನಿ ಅಧಿಕಾರಿಗಳ ಭೇಟಿ, ಪರಿಶೀಲನೆ

ಹೊಸದಿಗಂತ ಅಂಕೋಲಾ:

ತಾಲೂಕಿನ ರಾಮನಗುಳಿ ಸಮೀಪ ರಾಷ್ಟ್ರೀಯ ಹೆದ್ದಾರಿ 63 ರ ಪಕ್ಕ ಬಂಗ್ಲೆ ಘಟ್ಟದ ಬಳಿ ಸಣ್ಣ ಪ್ರಮಾಣದಲ್ಲಿ ಗುಡ್ಡ ‌ಕುಸಿತಗೊಂಡಿರುವ ಘಟನೆ ಸೋಮವಾರ ಸಂಜೆ ನಡೆದಿದೆ.

ಗುಡ್ಡ ಅಲ್ಪ‌ ಪ್ರಮಾಣದಲ್ಲಿ ಕುಸಿತಗೊಂಡಿರುವುದರಿಂದ ವಾಹನ ಸಂಚಾರಕ್ಕೆ ಯಾವುದೇ ಅಡೆತಡೆಯಾಗಿಲ್ಲ. ಆದರೆ ಮತ್ತೆ ಗುಡ್ಡ ಕುಸಿಯುವ ಆತಂಕವಿದ್ದ ಕಾರಣ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಲಾಗಿತ್ತು. ಮಾಹಿತಿ‌ ನೀಡಿದ ತಕ್ಷಣ ಸ್ಥಳಕ್ಕೆ ಅಧಿಕಾರಿಗಳ ದಂಡೇ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ ನಿರ್ವಹಣಾ ಗುತ್ತಿಗೆ ಸಂಸ್ಥೆ ಇಭಾ (ಐಬಿಹೆಚ್ಎ) ಸಿಬ್ಬಂದಿಗಳು ಆಗಮಿಸಿ ಜೆಸಿಬಿ ಮೂಲಕ ಮಣ್ಣು ತೆರವು ಕಾರ್ಯ ನಡೆಸಿದ್ದಾರೆ.

ಘಟನಾ ಸ್ಥಳಕ್ಕೆ ಜಿಯೋಲಾಜಿಸ್ಟ್ ಭೂ ವಿಜ್ಞಾನಿ ರಾಹುಲ್, ಉಪತಹಶೀಲ್ದಾರ ಗಿರೀಶ ಜಾಂಬಾವಳಿಕರ್, ರಾಮನಗುಳಿ ವಲಯ ಅರಣ್ಯಾಧಿಕಾರಿ ಸುರೇಶ ನಾಯ್ಕ, ಉಪವಲಯ ಅರಣ್ಯಾಧಿಕಾರಿ ಹಜರತ್ ಅಲಿ ಕುಂದಗೋಳ, ಕಂದಾಯ ನಿರೀಕ್ಷಕ ಮಂಜುನಾಥ ಮಾರಲಬಾವಿ, ಗ್ರಾಮ‌ ಲೆಕ್ಕಿಗ ಗಾದಿಲಿಂಗಪ್ಪ, ಸುಂಕಸಾಳ ಗ್ರಾ.ಪಂ ಅಧಿಕಾರಿ ಓಂಕಾರ, ಅಂಕೋಲಾ ಹೈವೇ ಪಟ್ರೋಲ್ ಪೋಲಿಸ್ ಸಿಬ್ಬಂದಿಗಳು, ರಾಷ್ಟ್ರೀಯ ಹೆದ್ದಾರಿ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ‌ ನಡೆಸಿ ಮುಂಜಾಗೃತ ಕ್ರಮ ಕೈಗೊಳ್ಳುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!