ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಸಿದ್ಧ ಪರಿಸರ ಸಂರಕ್ಷಕಿ ಸಾಲು ಮರದ ತಿಮ್ಮಕ್ಕ ಅವರ ಜೀವನ ಕಥೆಯನ್ನು ಆಧರಿಸಿ ನಿರ್ಮಾಣವಾಗುತ್ತಿರುವ ‘ವೃಕ್ಷಮಾತೆ’ ಎಂಬ ಚಿತ್ರಕ್ಕೆ ತಮ್ಮ ಅನುಮತಿ ಇಲ್ಲ ಎಂದು ತಿಮ್ಮಕ್ಕ ಹಾಗೂ ಅವರ ಸಾಕುಮಗ ಉಮೇಶ್ ಅವರು ಹೇಳಿದ್ದಾರೆ.
ಸೋಮವಾರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಆಗಮಿಸಿದ ತಿಮ್ಮಕ್ಕ ಮತ್ತು ಉಮೇಶ್, ‘‘ಶ್ರೀಲಕ್ಷ್ಮಿ ವೆಂಕಟೇಶ್ವರ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ದೇಶಕ ದಿಲೀಪ್‌ಕುಮಾರ್ ಎಚ್‌ಆರ್, ನಿರ್ಮಾಪಕರಾದ ಸೌಜನ್ಯ ಡಿ.ವಿ., ಎ. ಸಂತೋಷ್ ಮುರಳಿ ಹಾಗೂ ಒರಟ ಶ್ರೀ ಅವರು ‘ವೃಕ್ಷಮಾತೆ’ ಹೆಸರಿನಲ್ಲಿ ನನ್ನ ಜೀವನದ ಕಥೆಯನ್ನು ಆಧರಿಸಿ ಚಿತ್ರ ನಿರ್ಮಿಸುತ್ತಿದ್ದಾರೆ. ಆದರೆ ಈ ಸಿನಿಮಾಗೆ ನಾವು ಯಾವುದೇ ರೀತಿಯ ಅನುಮತಿ ನೀಡಿಲ್ಲ. ನಮ್ಮ ಒಪ್ಪಿಗೆ ಇಲ್ಲದೆ ಚಿತ್ರೀಕರಣ ಮುಂದುವರಿದಿದ್ದು, ಇದು ಸೂಕ್ತವಲ್ಲ’’ ಎಂದು ಆರೋಪಿಸಿದರು.
ಈ ಸಂಬಂಧ ಪ್ರತಿಕ್ರಿಯೆ ನೀಡಿದ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ನರಸಿಂಹಲು, ‘‘ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಚಿತ್ರತಂಡವನ್ನು ಕರೆಯಿಸಿ ಮಾತನಾಡಲಾಗುತ್ತದೆ. ಬಗೆಹರಿಸುವ ಕ್ರಮ ಕೈಗೊಳ್ಳುತ್ತೇವೆ’’ ಎಂದು ತಿಳಿಸಿದ್ದಾರೆ.
ಇನ್ನು, ಈ ಆರೋಪದ ಕುರಿತು ಚಿತ್ರತಂಡದ ಪ್ರತಿಕ್ರಿಯೆ ಇನ್ನೂ ಲಭ್ಯವಾಗಿಲ್ಲ.