ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಾಮುಂಡಿ ಬೆಟ್ಟದಲ್ಲಿ ಜೂನ್ 27ರಿಂದ ತಿಂಗಳ ಕಾಲ ಆಷಾಢ ಶುಕ್ರವಾರ ಆಚರಣೆ ನಡೆಯಲಿದೆ, ಇದರ ನಡುವೆ ವಿಶೇಷ ದರುಶನಕ್ಕೆ 2,000 ರೂ. ಟಿಕೆಟ್ ಪರಿಚಯಿಸಿದ ರಾಜ್ಯ ಸರ್ಕಾರದ ವಿರುದ್ಧ ಸ್ಥಳೀಯ ನಿವಾಸಿಗಳು ಕಿಡಿಕಾರಿದ್ದು, ಸೋಮವಾರ ಪ್ರತಿಭಟನೆ ನಡೆಸಿದ್ದಾರೆ.
ನಗರದ ಹಳೆ ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾವಣೆಗೊಂಡ ಪ್ರತಿಭಟನಾಕಾರರು, ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಚಾಮುಂಡೇಶ್ವರಿ ದೇವಸ್ಥಾನದ ಸೇವಾ ಶುಲ್ಕಗಳನ್ನು ಏಕಾಏಕಿ 300 ರೂ. ನಿಂದ 550 ರೂ.ಗೆ ಏರಿಸಿರುವುದು ಖಂಡನೀಯ. ಭಕ್ತಾದಿಗಳ ಧಾರ್ಮಿಕ ಆಚರಣೆ ಮೇಲೆ ಕಣ್ಣಿಟ್ಟು, ಬಿಟ್ಟಿ ಭಾಗ್ಯಗಳಿಗೆ ಹಣ ಹೊಂದಿಸಲು ಹೊರಟಿರುವುದು ದುರಾದೃಷ್ಟಕರ ಸಂಗತಿ.
ಈ ವರ್ಷ ಆಷಾಢ ಶುಕ್ರವಾರದ ವಿಶೇಷ ದರ್ಶನಕ್ಕಾಗಿ 2000 ರೂ. ಟಿಕೆಟ್ ಮಾಡಿರುವುದು ಖಂಡನೀಯ. ಸಾರ್ವಜನಿಕರಿಂದ ಹಣವನ್ನು ಹಗಲು ದರೋಡೆ ಮಾಡಲು ಹೊರಟಿದೆ. ದೇವರ ದರ್ಶನಕ್ಕೆ ಸರ್ಕಾರ ಇಷ್ಟೊಂದು ದುಬಾರಿ ಟಿಕೆಟ್ ಮಾಡಲು ಹೊರಟಿರುವುದು ನಾಚಿಕೆಗೇಡಿನ ಸಂಗತಿ. ಸರ್ಕಾರ ಜನರಿಗೆ ಒಂದು ಕೈಯಲ್ಲಿ ಕೊಟ್ಟು ದೇವರ ಹೆಸರಿನಲ್ಲಿ ಇನ್ನೊಂದು ಕೈಯಿಂದ ಕಿತ್ತುಕೊಳ್ಳುತ್ತಿದೆ. ಕೂಡಲೇ 2000 ರೂ. ದುಬಾರಿ ಟಿಕೆಟ್ ರದ್ದುಗೊಳಿಸಬೇಕು. ಸೇವಾಶುಲ್ಕವನ್ನು ಯಥಾ ಸ್ಥಿತಿಗೆ ತರಬೇಕು ಎಂದು ಒತ್ತಾಯಿಸಿದರು.