ಹೊಸದಿಗಂತ ವರದಿ ಮಡಿಕೇರಿ:
ಕೊಡಗು ಜಿಲ್ಲೆಯಲ್ಲಿ ಸೋಮವಾರ ರಾತ್ರಿಯಿಂದ ಭಾರೀ ಮಳೆಯಾಗುತ್ತಿದ್ದು, ಭಾಗಮಂಡಲದ ತ್ರಿವೇಣಿ ಸಂಗಮ ಜಲಾವೃತಗೊಂಡಿವೆ.
ಭಾಗಮಂಡಲ- ನಾಪೋಕ್ಲು ರಸ್ತೆಯ ಮೇಲೆ ಕಾವೇರಿ ಹರಿಯುತ್ತಿದ್ದು, ಪ್ರಸಕ್ತ ಮೇಲ್ಸೇತುವೆ
ಇರುವುದರಿಂದ ಸಂಚಾರಕ್ಕೆ ಅಡಚಣೆಯಾಗಿಲ್ಲ. ಕಳೆದ ರಾತ್ರಿಯಿಂದ ಬ್ರಹ್ಮಗಿರಿ ಪರ್ವತ ಶ್ರೇಣಿಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಕಳೆದ 24ಗಂಟೆಗಳಲ್ಲಿ 195ಮಿ.ಮೀ.ಮಳೆ ದಾಖಲಾಗಿದೆ. ಪರಿಣಾಮವಾಗಿ ತಲಕಾವೇರಿ, ಭಾಗಮಂಡಲ ವ್ಯಾಪ್ತಿಯಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಮೇ ತಿಂಗಳಾಂತ್ಯದಲ್ಲಿ ಸುರಿದ ಮಳೆಗೂ ಭಾಗಮಂಡಲದ ತ್ರಿವೇಣಿ ಸಂಗಮ ಹಾಗೂ ಅಲ್ಲಿನ ಪುಷ್ಫೋದ್ಯಾನ ಮುಳುಗಡೆಯಾಗಿತ್ತು.
ಜಿಲ್ಲಾ ಕೇಂದ್ರ ಮಡಿಕೇರಿಯಲ್ಲೂ ಭಾರೀ ಮಳೆಯಾಗುತ್ತಿದ್ದು, ಜಿಲ್ಲೆಯ ಅಂಗನವಾಡಿ, ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಮಳೆಯ ನಡುವೆ ದಟ್ಟ ಮಂಜು ಆವರಿಸುತ್ತಿದ್ದು, ಜಿ.ಪಿ.ರಾಜರತ್ನಂ ಅವರ ಮಡಿಕೇರಿ ಮೇಲ್ ಮಂಜು ಹಾಡನ್ನು ನೆನಪಿಸುತ್ತಿದೆ. ಹವಾಮಾನ ಇಲಾಖೆ ಕಳೆದ ಮೂರು ದಿನಗಳಲ್ಲಿ ರೆಡ್ ಅಲರ್ಟ್ ಘೋಷಿಸಿದ್ದರೂ, ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಾಗಿರಲಿಲ್ಲ. ಆದರೆ ಸೋಮವಾರ ರಾತ್ರಿಯಿಂದ ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು, ನದಿ, ತೊರೆಗಳು ಉಕ್ಕಿ ಹರಿಯಲಾಂಭಿಸಿದೆ.
ಹಾರಂಗಿ ಜಲಾಶಯ ಭರ್ತಿಯಾಗುವ ಹಂತ ತಲುಪಿದ್ದು, ಮುಂಜಾಗ್ರತಾ ಕ್ರಮವಾಗಿ 10ಸಾವಿರ ಕ್ಯುಸೆಕ್ಸ್ ನೀರನ್ನು ನದಿಗೆ ಹರಿಸಲಾಗುತ್ತಿದೆ. ಜಲಾನಯನ ಪ್ರದೇಶಗಳಲ್ಲಿ ಹೆಚ್ಚಿನ ಮಳೆಯಾಗುತ್ತಿರುವುದರಿಂದ ಜಲಾಶಯದ ಒಳ ಹರಿವು ಕ್ಷಣಕ್ಷಣವೂ ಏರಿಕೆಯಾಗುತ್ತಿದ್ದು, ಪರಿಣಾಮವಾಗಿ ಹೊರ ಹರಿವಿನ ಪ್ರಮಾಣವನ್ನೂ ಹೆಚ್ಚಿಸುವ ಅನಿವಾರ್ಯತೆ ತಲೆದೋರಿದೆ.
ಇದರಿಂದಾಗಿ ಹಾರಂಗಿ ಜಲಾಶಯದ ಕೆಳಭಾಗ, ಹಾಗೂ ಕಾವೇರಿ ನದಿ ದಂಡೆಯ ತಗ್ಗು ಪ್ರದೇಶಗಳಲ್ಲಿ ವಾಸಿಸುವವರು ಎಚ್ಚರದಿಂದಿರುವಂತೆ ಮತ್ತು ತಮ್ಮ ಜಾನುವಾರುಗಳನ್ನೂ ಸುರಕ್ಷಿತ ಸ್ಥಳಗಳಿಗೆ ಸಾಗಿಸುವಂತೆ ಸೂಚಿಸಲಾಗಿದೆ. ಅಮ್ಮತ್ತಿ ಹೋಬಳಿ ಕರಡಿಗೋಡು ಗ್ರಾಮದ ಹೊಳೆಕೆರೆ ರಸ್ತೆ ಕಾವೇರಿ ನದಿ ಪ್ರವಾಹದಿಂದ ಸಂಪರ್ಕ ಕಡಿತಗೊಂಡಿದ್ದು, ಬದಲಿ ರಸ್ತೆಯಲ್ಲಿ ಸಂಚರಿಸುವಂತಾಗಿದೆ.
ಈ ಬಗ್ಗೆ ಕಂದಾಯ ಪರಿವೀಕ್ಷಕರು ಸ್ಥಳ ಪರಿಶೀಲನೆ ನಡೆಸಿ ಅಪಾಯದ ಸ್ಥಳಗಳಿಗೆ ತೆರಳದಂತೆ ಹಾಗೂ ಆ ಭಾಗದ ಜನರಿಗೆ ಕಾಳಜಿ ಕೇಂದ್ರಕ್ಕೆ ತೆರಳಲು ಸೂಚಿಸಲಾಗಿದೆ. ಧಾರಾಕಾರ ಮಳೆಗೆ ಜಿಲ್ಲೆಯ ಅಲ್ಲಲ್ಲಿ ಮನೆಗಳು ಕುಸಿಯುತ್ತಿರುವ ಬಗ್ಗೆ ವರದಿಯಾಗಿದೆ.