ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಸ್ರೇಲ್ ಮತ್ತು ಇರಾನ್ ನಡುವಿನ ಮಿಲಿಟರಿ ಸಂಘರ್ಷ ಮತ್ತಷ್ಟು ತೀವ್ರಗೊಂಡಿದೆ. ಎರಡೂ ದೇಶದವರು ಪರಸ್ಪರ ಹೊಸ ಕ್ಷಿಪಣಿ ದಾಳಿಗಳನ್ನು ಮುಂದುವರೆಸಿದ್ದರಿಂದ ಯುದ್ಧದ ಸತತ ಆರನೇ ದಿನ ಕೂಡ ಸಾವು-ನೋವಿನ ಸಂಖ್ಯೆ ಹೆಚ್ಚಾಗಿದೆ. ಈ ಎರಡೂ ದೇಶಗಳ ನಡುವಿನ ಯುದ್ಧದಲ್ಲಿ 600ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.
ಇರಾನ್ನಿಂದ ಇಂದು ಬೆಳಗಿನ ಜಾವ ಕ್ಷಿಪಣಿ ದಾಳಿಗಳ ನಂತರ ಟೆಲ್ ಅವೀವ್ ಮೇಲೆ ಸ್ಫೋಟಗಳು ವರದಿಯಾಗಿವೆ. ಆದರೆ ಮಿಲಿಟರಿ ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡು ಇಸ್ರೇಲ್ ವಾಯುದಾಳಿಗಳು ಟೆಹ್ರಾನ್ ಬಳಿ ಮುಂದುವರೆದಿವೆ.
ಇದರ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು G7 ಶೃಂಗಸಭೆಯಿಂದ ಹಠಾತ್ತನೆ ನಿರ್ಗಮಿಸಿದ ಕಾರಣ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಬಂದಿರುವ ಎಚ್ಚರಿಕೆಗಳ ಸರಣಿಯಿಂದಾಗಿ ಅಮೆರಿಕ ಇಸ್ರೇಲ್ ಜೊತೆ ಕೈಜೋಡಿಸುವ ವದಂತಿಗಳು ಹೆಚ್ಚಾಗುತ್ತಿವೆ.