ಹೊಸದಿಗಂತ ದಾವಣಗೆರೆ:
ರೈತರೊಬ್ಬರು ತಮ್ಮದೇ ಅಡಿಕೆ ತೋಟದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹವಾಗಿ ಪತ್ತೆಯಾದ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕು ವೀರಾಪುರ ಗ್ರಾಮದಲ್ಲಿ ಬುಧವಾರ ಬೆಳಕಿಗೆ ಬಂದಿದೆ.
ಗ್ರಾಮದ ರೈತ ತಿಮ್ಮಪ್ಪ ಮೃತ ರೈತ. ವೀರಾಪುರ ಗ್ರಾಮದ ದರಖಾಸ್ತು ಜಮೀನನ್ನು ರೈತ ತಿಮ್ಮಪ್ಪ ಖರೀದಿಸಿದ್ದರು. ಮೂಲ ಮಾಲೀಕ ಬೇರೆಯವರಿಗೆ ಜಮೀನು ಮಾರಾಟ ಮಾಡಿದ್ದು, ಬಳಿಕ ಅದೇ ಜಮೀನನ್ನು ಮೂರನೇ ವಾರಸುದಾರನಾಗಿ ಮೂಡಲಪ್ಪ ಎಂಬ ವ್ಯಕ್ತಿ ಖರೀದಿಸಿದ್ದರು. ಇದೇ ಮೂಡಲಪ್ಪನಿಂದ ಮೃತ ರೈತ ತಿಮ್ಮಪ್ಪ ಜಮೀನು ಖರೀದಿಸಿ, ಅಡಿಕೆ ತೋಟ ಮಾಡಿಕೊಂಡಿದ್ದರು. ತಿಮ್ಮಪ್ಪನ ಜಮೀನಿನ ಪಕ್ಕದ ವ್ಯಕ್ತಿಯು ಇದೇ ಜಮೀನು ಖರೀದಿಸಿದ್ದ ಮೂರನೇ ವಾರಸುದಾರ ಮೂಡಲಪ್ಪನ ವಿರುದ್ಧ ಕೇಸ್ ದಾಖಲಿಸಿದ್ದರು. ಸಾಲಸೋಲ ಮಾಡಿ ಖರೀದಿಸಿದ್ದ ಸುಮಾರು 4-26 ಎಕರೆ ಜಮೀನು, ಅಡಿಕೆ ಗಿಡಗಳನ್ನು ಬೆಳೆದಿದ್ದ ತೋಟವು ಎಲ್ಲಿ ತನ್ನ ಕೈತಪ್ಪುತ್ತದೋ ಎಂಬ ಆತಂಕದಲ್ಲಿ ತಿಮ್ಮಪ್ಪ ತನ್ನದೇ ತೋಟದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗಿದೆ.
ಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದ ತಿಮ್ಮಪ್ಪನನ್ನು ಕಳೆದುಕೊಂಡ ಕುಟುಂಬ ವರ್ಗದ ರೋಧನ ಮುಗಿಲು ಮುಟ್ಟುವಂತಿತ್ತು. ಮುಂಚೆ ತಮ್ಮ ಹೆಸರಿಗೆ ಬಂದ ಜಮೀನು ಇದೀಗ ಬೇರೆಯವರ ಹೆಸರಿಗೆ ಹೋಗಲು ಏನು ಕಾರಣ? ನಮಗೆ ನ್ಯಾಯ ಒದಗಿಸಿ. ತಿಮ್ಮಪ್ಪನವರ ಸಾವಿನ ಬಗ್ಗೆ ತಮಗೆ ಅನುಮಾನವಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ದುಃಖತಪ್ತ ಕುಟುಂಬ ವರ್ಗದವರು ಪೊಲೀಸ್ ಇಲಾಖೆಗೆ ಒತ್ತಾಯಿಸಿದ್ದಾರೆ.