ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಮತ್ತು ಕೆನಡಾ ನಡುವಿನ ದ್ವಿಪಕ್ಷೀಯ ಸಂಬಂಧಗಳು ಅತ್ಯಂತ ಪ್ರಾಮುಖ್ಯತೆ ಪಡೆದಿದ್ದು, ಮಾನವ ಕುಲ ಹಾಗೂ ಪ್ರಜಾಪ್ರಭುತ್ವದ ಬಲವರ್ಧನೆಗೆ ಉಭಯ ದೇಶಗಳು ಒಟ್ಟಾಗಿ ಶ್ರಮಿಸಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಕೆನಡಾದ ಕನಾ-ನಾಸ್ಕಿಸ್ ನಲ್ಲಿ ನಡೆಯುತ್ತಿರುವ 51ನೇ ಜಿ-7 ಶೃಂಗಸಭೆಯ ಸಂದರ್ಭದಲ್ಲಿ, ಕೆನಡಾ ಪ್ರಧಾನಿ ಮಾರ್ಕ್ ಕಾರ್ನೆ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ ಸಂದರ್ಭದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೆನಡಾದ ಹಲವಾರು ಕಂಪನಿಗಳು ಭಾರತದಲ್ಲಿ ಬಂಡವಾಳ ಹೂಡಿರುವಂತೆ ಭಾರತದ ಕಂಪನಿಗಳೂ ಸಹ ಕೆನಡಾದಲ್ಲಿ ಹೂಡಿಕೆ ಮಾಡಿವೆ. ಭಾರತ ಮತ್ತು ಕೆನಡಾದ ಸಂಬಂಧಗಳನ್ನು ಮತ್ತಷ್ಟು ಬಲವರ್ಧನೆಗೊಳಿಸುವುದು ಅಗತ್ಯ ಎಂದು ಪ್ರಧಾನಿ ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ, ಭಾರತ ಮತ್ತು ಕೆನಡಾ ದೇಶಗಳು ಪ್ರಜಾಪ್ರಭುತ್ವ, ಸ್ವಾತಂತ್ರ್ಯ ಮತ್ತು ನೆಲದ ಕಾನೂನಿನಲ್ಲಿ ಬಲವಾದ ವಿಶ್ವಾಸ ಹೊಂದಿವೆ ಎಂದು ಹೇಳಿದ್ದಾರೆ. ವ್ಯಾಪಾರ, ಇಂಧನ, ಬಾಹ್ಯಾಕಾಶ, ಶುದ್ಧ ಇಂಧನ, ಖನಿಜ ಮತ್ತು ರಸಗೊಬ್ಬರ ಸೇರಿದಂತೆ ವಿವಿಧ ವಲಯಗಳಲ್ಲಿ ದ್ವಿಪಕ್ಷೀಯ ಸಹಕಾರ ವೃದ್ಧಿಗೆ ವಿಪುಲ ಅವಕಾಶಗಳಿವೆ ಎಂದು ತಿಳಿಸಿದ್ದಾರೆ. ಕೆನಡಾ ಪ್ರಧಾನಿ ಮಾರ್ಕ್ ಕಾರ್ನೆ, ಜಿ-7 ರಾಷ್ಟ್ರಗಳ ಶೃಂಗಸಭೆಯಲ್ಲಿ ಭಾರತ ಸತತವಾಗಿ ಪಾಲ್ಗೊಳ್ಳುತ್ತಿರುವುದು ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಜಿ-7 ರಾಷ್ಟ್ರಗಳ ಸಂಬಂಧ ವೃದ್ಧಿಗೆ ತೋರುತ್ತಿರುವ ಪ್ರಾಮುಖ್ಯತೆ ಎಷ್ಟು ಎಂಬುದನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.
ಈ ನಡುವೆ, ಪ್ರಧಾನಿ ನರೇಂದ್ರ ಮೋದಿ ಅವರು ಜರ್ಮನಿ, ಫ್ರಾನ್ಸ್, ಮೆಕ್ಸಿಕೊ ಮತ್ತು ದಕ್ಷಿಣ ಕೊರಿಯಾ ಸೇರಿದಂತೆ ವಿವಿಧ ರಾಷ್ಟ್ರಗಳ ನಾಯಕರೊಂದಿಗೆ ದ್ವಿಪಕ್ಷೀಯ ಸಂಬಂಧ ವೃದ್ಧಿ ಕುರಿತು ಸರಣಿ ಸಭೆಗಳನ್ನು ನಡೆಸಿದರು. ಪ್ರಧಾನಿ ನರೇಂದ್ರ ಮೋದಿ ಮತ್ತು ಜರ್ಮನಿಯ ಚಾನ್ಸಲರ್ ಫ್ರೆಡ್ರಿಕ್ ಮರ್ಜ್, ಭಾರತ ಮತ್ತು ಜರ್ಮನಿಯ ನಡುವೆ ಪ್ರಮುಖ ವಲಯಗಳಲ್ಲಿ ದ್ವಿಪಕ್ಷೀಯ ಸಹಕಾರ ವೃದ್ಧಿಗೆ ಇರುವ ಅವಕಾಶಗಳ ಕುರಿತು ಸುದೀರ್ಘ ಚರ್ಚೆ ನಡೆಸಿದರು. ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ಅವರು ಮೆಕ್ಸಿಕೊದ ಅಧ್ಯಕ್ಷ ಕ್ಲೌಡಿಯಾ ಶೆನ್ ಬಾಮ್ ಪರ್ಡೊ ಅವರೊಂದಿಗೂ ಮಾತುಕತೆ ನಡೆಸಿದರು. ಇದೇ ಮೊದಲ ಬಾರಿಗೆ ಉಭಯ ನಾಯಕರ ನಡುವೆ ಮಾತುಕತೆ ನಡೆದಿರುವುದು ಮಹತ್ವ ಪಡೆದಿದೆ.