October 8, 2026
Thursday, October 8, 2026
spot_img

ಲಂಚ ಆಸೆಗೆ ಬಿದ್ದ ಅಧಿಕಾರಿಗೆ ಶಾಕ್: 60 ಲಕ್ಷ ಹಣಕ್ಕೆ ಬೇಡಿಕೆಯಿಟ್ಟ ಅಬಕಾರಿ ಉಪ ಆಯುಕ್ತ ಸಸ್ಪೆಂಡ್

ಹೊಸದಿಗಂತ ಮಂಡ್ಯ:

ಹೊಸ ಮದ್ಯದ ಸನ್ನದು ನೀಡಲು ಲಂಚಕ್ಕೆ ಬೇಡಿಕೆ ಇಟ್ಟ ಆರೋಪದ ಮೇಲೆ ಮಂಡ್ಯ ಜಿಲ್ಲಾ ಅಬಕಾರಿ ಉಪ ಆಯುಕ್ತ (DC) ಆರ್. ನಾಗಶಯನ ಅವರನ್ನು ರಾಜ್ಯ ಸರ್ಕಾರ ಕರ್ತವ್ಯದಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದೆ.

ಸುಂದರ್ ಎಂಬುವವರಿಗೆ ಸಿಎಲ್-7 (CL-7) ಪರವಾನಗಿ ಮಂಜೂರು ಮಾಡಲು ನಾಗಶಯನ ಅವರು 60 ಲಕ್ಷ ರೂಪಾಯಿ ಲಂಚ ಕೇಳಿದ್ದರು ಎನ್ನಲಾಗಿದೆ. ಈ ಕುರಿತು ಅಧಿಕಾರಿಯದ್ದೇ ಎನ್ನಲಾದ ಆಡಿಯೋ ಸಂಭಾಷಣೆಯೊಂದು ಖಾಸಗಿ ವಾಹಿನಿಗಳಲ್ಲಿ ವೈರಲ್ ಆಗಿತ್ತು. ಇದು ಸರ್ಕಾರಿ ನೌಕರರ ನಡತೆ ನಿಯಮಗಳ ಸ್ಪಷ್ಟ ಉಲ್ಲಂಘನೆ ಎಂದು ಪರಿಗಣಿಸಲಾಗಿದೆ.

ಆರೋಪ ಕೇಳಿಬಂದ ತಕ್ಷಣ ಅಬಕಾರಿ ಆಯುಕ್ತರ ಕಚೇರಿಯಿಂದ ನಾಗಶಯನ ಅವರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿತ್ತು. ಆದರೆ, ಅವರು ನೀಡಿದ ಸಮಜಾಯಿಷಿ ತೃಪ್ತಿಕರವಾಗಿಲ್ಲದ ಕಾರಣ ಮತ್ತು ಲಂಚದ ಬೇಡಿಕೆ ಇಟ್ಟಿರುವುದು ಮೇಲ್ನೋಟಕ್ಕೆ ಸಾಬೀತಾದ ಹಿನ್ನೆಲೆಯಲ್ಲಿ, ಆರ್ಥಿಕ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅಜಯ್ ಎಸ್. ಕೊರಡೆ ಅವರು ಅಮಾನತಿನ ಕಟ್ಟುನಿಟ್ಟಿನ ಕ್ರಮ ಜರುಗಿಸಿದ್ದಾರೆ.

Must Read