ಬಡವರು ತಮ್ಮ ಮಕ್ಕಳನ್ನು ಉತ್ತಮ ಖಾಸಗಿ ಶಾಲೆಗೆ ಕಳಿಸಿ, ಗುಣಮಟ್ಟದ ಶಿಕ್ಷಣ ಒದಗಿಸಬೇಕು ಎಂದು ಯೋಚಿಸುತ್ತಾರೆ. ಆದರೆ ಇಂದಿನ ದುಬಾರಿ ಶುಲ್ಕದಿಂದಾಗಿ ಅವರ ಕನಸು ನನಸಾಗದೆ ಉಳಿಯುವುದೇ ಹೆಚ್ಚು.
ಆದರೆ ಇಂಥ ತಂದೆ-ತಾಯಿ ಅಳಲು ಅರಿತಿರುವ ಬೆಂಗಳೂರಿನ ವಾಗ್ದೇವಿ ವಿಲಾಸ ಶಿಕ್ಷಣ ಸಮೂಹ ಸಂಸ್ಥೆಯ ಅಧ್ಯಕ್ಷ ಕೆ. ಹರೀಶ್ 10 ವರ್ಷಗಳ ಹಿಂದೆಯೇ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು ವಾಗ್ದೇವಿ ವಿಲಾಸ ಸೂಪರ್ ಸ್ಕೂಲ್‌ವೊಂದನ್ನು ಮಾರತಹಳ್ಳಿಯ ಮುನ್ನೇಕೊಳಲಿನಲ್ಲಿ ಸ್ಥಾಪಿಸಿದ್ದರು. ಸಿ. ಬಿ.ಎಸ್. ಇ ಶಿಕ್ಷಣ ಪದ್ಧತಿಯಲ್ಲಿ ಉಚಿತ ಶಿಕ್ಷಣ ನೀಡುವ ಅವರ ಕಳಕಳಿ ನೋಡಿ ಎಲ್ಲೆಡೆಯಿಂದ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಇದೀಗ ಬಡ ಮಕ್ಕಳ ಉಚಿತ ಸಿ.ಬಿ.ಎಸ್.ಇ. ಶಿಕ್ಷಣದ ಕೊರಗನ್ನು ನೀಗಿಸಲು ಮತ್ತೊಂದು ವಾಗ್ದೇವಿ ವಿಲಾಸ ಸೂಪರ್ ಸ್ಕೂಲನ್ನು ವರ್ತೂರಿನಲ್ಲಿ ಸ್ಥಾಪಿಸಿದ್ದಾರೆ.
ಈ ಹಿಂದೆ 18 ವರ್ಷಗಳ ಕಾಲ ಇಸ್ರೋ ವಿಜ್ಞಾಜಿಯಾಗಿದ್ದ ಕೆ. ಹರೀಶ್. ವಿಜ್ಞಾನ, ತಂತ್ರಜ್ಞಾನದ ಬಗ್ಗೆ ಆಳವಾದ ಜ್ಞಾನ ಹೊಂದಿದ್ದು ಕಳೆದ 2 ದಶಕಗಳಲ್ಲಿ ತಮ್ಮ ಶಾಲೆಗಳ ಮೂಲಕ ಲಕ್ಷಾಂತರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿದ್ದಾರೆ. ವೈಜ್ಞಾನಿಕ ಮನೋಭಾವದ ಜೊತೆಗೆ ಭಾರತೀಯ ಸಂಸ್ಕೃತಿ ಮತ್ತು ಗುರುಕುಲ ಮಾದರಿಯ ಶಿಕ್ಷಣವನ್ನು ತಮ್ಮ ಎಲ್ಲಾ ಶಾಲೆ ಮತ್ತು ಕಾಲೇಜುಗಳಲ್ಲಿ ಅಳವಡಿಸುವಲ್ಲಿಯೂ ಯಶಸ್ವಿಯಾಗಿದ್ದಾರೆ. ಸ್ವತ: ಕವಿಯೂ ಮತ್ತು ವಾಗ್ಮಿಯೂ ಆಗಿರುವ ಅವರು ಕವನ ಸಂಕಲನವನ್ನೂ ಪ್ರಕಟಿಸಿದ್ದಾರೆ.
ವಾಗ್ದೇವಿ ವಿಲಾಸ ಸೂಪರ್ ಸ್ಕೂಲ್‍ನಲ್ಲಿ ಎಲ್ಲಾ ಬಗೆಯ ಸೌಕರ್ಯಗಳಿದ್ದು ವಿಜ್ಞಾನ ಪ್ರಯೋಗಾಲಯಗಳು, ಗಣಿತ ಪ್ರಯೋಗಾಲಯ, ಗಣಕಯಂತ್ರ ವಿಭಾಗ, ಶ್ರವಣ, ದೃಶ್ಯ ವಿಭಾಗಗಳು ಸುಸಜ್ಜಿತವಾಗಿವೆ. ಪ್ರಾಜೆಕ್ಟ್ ಮಾಡಿಸುವುದು, ಪ್ರಾತ್ಯಕ್ಷಿಕೆ, ಸಂವಾದ, ಅಭಿನಯ ಹಾಗೂ ರಸಪ್ರಶ್ನೆಗಳಂತಹ ಚಟುವಟಿಕೆ ಕೊಟ್ಟು ಮಕ್ಕಳೆಲ್ಲ ಸ್ವಯಂ ಕ್ರಿಯಾಶೀಲರಾಗಲು ಪ್ರೆರೇಪಿಸುವ ವ್ಯವಸ್ಥೆ ಈ ಶಾಲೆಯಲ್ಲಿದೆ. ಮಕ್ಕಳನ್ನು ಆಟದಲ್ಲಿ ತೊಡಗಿಸಲು ವಿಶಾಲವಾದ ಮೈದಾನವಿದೆ. ಇವೆಲ್ಲವುಗಳನ್ನು ಒದಗಿಸುವ ಸಿ.ಬಿ.ಎಸ್.ಇ ಪಠ್ಯಕ್ರಮ ಹೊಂದಿರುವ ಶಾಲೆಯಲ್ಲಿ ಮಗು ಕಲಿಯಬೇಕೆಂದರೆ ಲಕ್ಷಾಂತರ ರೂಪಾಯಿ ಬೇಕು. ಆದರೆ ವಾಗ್ದೇವಿ ವಿಲಾಸ ಸೂಪರ್ ಸ್ಕೂಲ್ ಮಾತ್ರ ಇವೆಲ್ಲಾ ಸವಲತ್ತುಗಳನ್ನು ಮಕ್ಕಳಿಗೆ ಉಚಿತವಾಗಿ ನೀಡುತ್ತಿದೆ ಎಂದರೆ ನಂಬಲೇಬೇಕು!
ಹೌದು, ಇಲ್ಲಿ 800ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉಚಿತ ಶಿಕ್ಷಣ ಪಡೆಯುತ್ತಿದ್ದಾರೆ.
ರಾಜ್ಯದ ಪ್ರಥಮ ಶಾಲೆ
ಸಿ.ಬಿ.ಎಸ್.ಇ. ಪಠ್ಯಕ್ರಮದಲ್ಲಿ ಬಡ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ಒದಗಿಸುತ್ತಿರುವುದು ವಾಗ್ದೇವಿ ವಿಲಾಸ ಸೂಪರ್ ಶಾಲೆಯು ರಾಜ್ಯದಲ್ಲೇ ಪ್ರಥಮ ಇರಬಹುದು. ಈ ಶಾಲೆಯನ್ನು ತೆರೆಯುವ ಉದ್ದೇಶದ ಹಿಂದೆ ಮಾನವೀಯ ದೃಷ್ಟಿಕೋನವಿದೆ. ಬಡವರಲ್ಲೂ ಎಷ್ಟೋ ಮಕ್ಕಳು ಪ್ರತಿಭಾವಂತರಿರುತ್ತಾರೆ. ಆದರೆ ಸರಿಯಾದ ವೇದಿಕೆ ಅವರಿಗಿರುವುದಿಲ್ಲ. ಈ ನಿಟ್ಟಿನಲ್ಲಿ “ನಾನು ಬಡ ಪ್ರತಿಭಾನ್ವಿತ ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕಿಸುವ ಅಭಿಲಾಷೆಯಿಂದ ಈ ಉಚಿತ ಶಿಕ್ಷಣದ ಯೋಜನೆ ಪ್ರಾರಭಿಸಿದೆ,” ಎನ್ನುವುದು ವಾಗ್ದೇವಿ ವಿಲಾಸ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕೆ.ಹರೀಶ್ ಅವರ ಮಾತು.
ಎರಡು ದಶಕಗಳ ಕಾಲ ಶಿಕ್ಷಣ ಕ್ಷೇತ್ರದ ಅನುಭವ ಹೊಂದಿರುವ ಕೆ. ಹರೀಶ್ 9 ಸಿ.ಬಿ.ಎಸ್.ಇ ಶಾಲೆಗಳನ್ನು ಹೊಂದಿದ್ದಾರೆ. ಆದರೆ ಅಲ್ಲಿ ಮಧ್ಯಮ ಮತ್ತು ಆರ್ಥಿಕವಾಗಿ ಸದೃಢವಾಗಿರುವ ವರ್ಗದ ಮಕ್ಕಳೇ ಹೆಚ್ಚಾಗಿ ಕಲಿಯುತ್ತಿದ್ದಾರೆ. ಬಡವರ ಮಕ್ಕಳ ಕತೆಯೇನು ಎಂಬ ವಿಚಾರ ಅವರಿಗೆ ಬಂತು. ತಮ್ಮ ಶಿಕ್ಷಣ ಮಾದರಿ ಬಡವರನ್ನೂ ತಲುಪಬೇಕು ಎಂಬ ಉದ್ದೇಶದಿಂದ `ವಾಗ್ದೇವಿ ವಿಲಾಸ ಸೂಪರ್ ಸ್ಕೂಲ್ಸ್ ಎಜ್ಯುಕೇಷನ್ ಆಂಡ್ ಚಾರಿಟೇಬಲ್ ಟ್ರಸ್ಟ್’ವೊಂದನ್ನು ಆರಂಭಿಸಿ ಬಡ ಮಕ್ಕಳಿಗೆ ಉಚಿತ ಶಿಕ್ಷಣ ಒದಗಿಸುವ ಕಾರ್ಯ ಪ್ರಾರಂಭಿಸಿಯೇ ಬಿಟ್ಟರು.
ಮಕ್ಕಳಿಗೆ ಪ್ರಕೃತಿಯ ಪಾಠ
ಮಾರತಹಳ್ಳಿರುವ ಶಾಲಾ ಆವರಣ ವಿಶೇಷವಾಗಿದ್ದು, 84 ಪ್ರಬೇಧಗಳ 600 ಕ್ಕೂ ಹೆಚ್ಚು ಮರಗಳು ಬೆಳೆದು ನಿಂತಿವೆ. ಮರಗಳನ್ನು ಅರಸಿ ಬಂದು ನೆಲೆನಿಂತಿರುವ ವೈವಿಧ್ಯಮಯ ಹಕ್ಕಿಗಳ ಕಲರವದಿಂದ ಮಕ್ಕಳಿಗೆ ಪ್ರಕೃತಿಯ ಪಾಠ ಸಿಗುತ್ತಿದೆ. ಮಳೆನೀರು ಕೊಯ್ಲು ಮಾಡುವ ವಿಧಾನ ಹೇಳಿಕೊಡಲಾಗುತ್ತದೆ. ಅದಕ್ಕೆ ಪೂರಕವಾಗಿ ಶಾಲೆಯಲ್ಲಿ 15 ಕ್ಕೂ ಹೆಚ್ಚು ಇಂಗುಬಾವಿಗಳಿವೆ. ಜೊತೆಗೆ ಸೋಲಾರ್ ವಿದ್ಯುತ್, ಕಾಗದ ಮರು ತಯಾರಿಕೆ, ವಿಜ್ಞಾನವನ ಮುಂತಾದ ಕಲಿಕಾ ಕೇಂದ್ರಗಳು ಮಕ್ಕಳಿಗೆ ಪಠ್ಯೇತರ ಚಟುವಟಿಗಳ ತಾಣಗಳಾಗಿವೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು ಮತ್ತು ರಾಮನಗರ ಜಿಲ್ಲೆಗಳಲ್ಲಿ ವಾಗ್ದೇವಿ ವಿಲಾಸ ಶಿಕ್ಷಣ ಸಂಸ್ಥೆಯ ಶಾಲೆಗಳನ್ನು ಕೆ. ಹರೀಶ್ ಅವರು ಸ್ಥಾಪಿಸಿದ್ದಾರೆ. ಮಾರತಹಳ್ಳಿ, ಬಿಡದಿ ಹಾಗೂ ವರ್ತೂರಿನಲ್ಲಿ ಪೂರ್ವ ಪ್ರಾಥಮಿಕ ಶಾಲೆಗಳನ್ನು ಆರಂಭಿಸಿದ್ದು, ಮಾಂಟೆಸ್ಸರಿ ಮತ್ತು ಕಿಂಡರ್ ಗಾರ್ಡನ್ ಶಿಕ್ಷಣ ಪದ್ಧತಿ ಅಳವಡಿಸಿಕೊಳ್ಳಲಾಗಿದೆ. ಹಲಸಹಳ್ಳಿಯಲ್ಲಿ ವಾಗ್ದೇವಿ ವಿಲಾಸ ಪದವಿಪೂರ್ವ ಮತ್ತು ಪದವಿ ಕಾಲೇಜು ಇದೆ. ವಿದ್ಯಾರ್ಥಿಗಳಿಗೆ ಸಂಗೀತ ಕಲಿಸಲು ವಾಗ್ದೇವಿ ವಿಲಾಸ ಸಂಗೀತ ಕಲಾಮಂದಿರ ಆರಂಭಿಸಲಾಗಿದೆ.
ಮಾಜಿ ಇಸ್ರೋ ವಿಜ್ಞಾನಿ
ವಾಗ್ದೇವಿ ವಿಲಾಸ ಶಿಕ್ಷಣ ಸಮೂಹ ಸಂಸ್ಥೆಯ ಅಧ್ಯಕ್ಷ ಕೆ.ಹರೀಶ್ ಇಸ್ರೋದಲ್ಲಿ ಕೆಲಸ ಮಾಡಿರುವ ಮಾಜಿ ವಿಜ್ಞಾನಿ. ತಮ್ಮ ಪುತ್ರನಿಗೆ ಕಾನ್ವೆಂಟ್ ಶಾಲೆಯ ಅತಿಯಾದ ಶಿಸ್ತು ಹಿಂಸೆ ಕೊಡುವುದನ್ನು ಗಮನಿಸಿದ ಅವರು ಶಾಲಾ ಮುಖ್ಯಸ್ಥರನ್ನು ಈ ಬಗ್ಗೆ ಪ್ರಶ್ನಿಸಿದ್ದಕ್ಕೆ, ಅವರಾಡಿದ್ದ ಮಾತುಗಳನ್ನು ಅರಗಿಸಿಕೊಳ್ಳಲಾಗದೆ ಹರೀಶ್ ಹೊಸ ಶಾಲೆ ಆರಂಭಿಸುವುದಕ್ಕೆ ದೃಢವಾದ ಸಂಕಲ್ಪ ಮಾಡಿ ತಮ್ಮ ವೃತ್ತಿಗೆ ರಾಜೀನಾಮೆ ನೀಡಿದರು. `ಶಾಲೆಗೆ ಸೇರಿಸಿ ಎಂದು ನಾವು ಮನವಿ ಮಾಡಿಲ್ಲ. ನೀವಾಗಿಯೇ ಹುಡುಕಿ ಬಂದು ಶಾಲೆ ಆಯ್ಕೆ ಮಾಡಿಕೊಂಡಿದ್ದೀರಿ. ಇಲ್ಲಿರುವ ಎಲ್ಲ ಕಟ್ಟಳೆಗಳನ್ನು ಒಪ್ಪಿಕೊಳ್ಳಲೇ ಬೇಕು’ ಎಂದು ಕಾನ್ವೆಂಟ್ ಶಾಲೆಯ ಆಡಳಿತ ಮಂಡಳಿ ಮುಖ್ಯಸ್ಥರು ಹೇಳಿದ್ದ ಮಾತಿಗೆ ಉತ್ತರವಾಗಿಯೆ ವಾಗ್ದೇವಿ ವಿಲಾಸ ಶಿಕ್ಷಣ ಸಂಸ್ಥೆಯನ್ನು 2004 ರಲ್ಲಿ ಪ್ರಾರಂಭಿಸಿದರು. ವಿದ್ಯಾರ್ಥಿಗಳಿಗೆ ಹೊರೆಯಾಗದ ಸ್ವಯಂ ಪ್ರೇರಿತರಾಗುವ ಶಿಸ್ತು ಈ ಶಾಲೆಯಲ್ಲಿದೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು ಮತ್ತು ರಾಮನಗರ ಜಿಲ್ಲೆಗಳಲ್ಲಿ ವರ್ತೂರು, ವೈಟ್‌ಫೀಲ್ಡ್, ಬೀರೂರು, ನೆಲಮಂಗಲ, ಮಾರತಹಳ್ಳಿ, ರಾಮಮೂರ್ತಿನಗರ, ಬಿಡದಿ.. ಹೀಗೆ ಸಿ.ಬಿ.ಎಸ್.ಇ. ಪಠ್ಯಕ್ರಮದ ಒಂಭತ್ತು ಶಾಲೆಗಳು ತೆರೆದುಕೊಂಡಿದೆ. ಅವುಗಳಲ್ಲಿ 2 ಕಡೆಗಳಲ್ಲಿ (ಮಾರತಹಳ್ಳಿ ಮತ್ತು ವರ್ತೂರು) ಸ್ಥಾಪಿತವಾಗಿರುವ ವಾಗ್ದೇವಿ ವಿಲಾಸ ಸೂಪರ್ ಸ್ಕೂಲ್‌ಗಳು ಮಾತ್ರ ಬಡಮಕ್ಕಳಿಗೆ ಉಚಿತ ಶಿಕ್ಷಣ ಒದಗಿಸಲು ಮೀಸಲಿದೆ.