ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಪ್ರಕರಣದ ನಂತರ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದ್ದು ಹೊಸ ಕಾನೂನು ಜಾರಿಗೆ ತರಲು ನಿರ್ಧರಿಸಿದೆ.
ಕ್ರೀಡೆ, ಸರ್ಕಸ್ ಇತರೇ ವಾಣಿಜ್ಯ ಉದ್ದೇಶದ ಕಾರ್ಯಕ್ರಮಗಳಿಗೆ ಸರ್ಕಾರ ಬಿಗಿ ನಿಯಮ ಜಾರಿಗೆ ಮುಂದಾಗಿದೆ. ಕಾರ್ಯಕ್ರಮಕ್ಕೂ ಮುನ್ನ ಅಥವಾ ಕಾರ್ಯಕ್ರಮ ನಡೆಯುವಾಗ ಜನರನ್ನು ನಿಯಂತ್ರಿಸಲಾಗದಿದ್ದರೆ ಆಯೋಜಕರಿಗೆ 3 ವರ್ಷ ಜೈಲು, 5 ಲಕ್ಷ ವರೆಗೆ ದಂಡ ವಿಧಿಸಬಹುದಾಗಿದೆ, ಕಾರ್ಯಕ್ರಮದ ಆಯೋಜಕರು ಆಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅನುಮತಿಗೆ ಅರ್ಜಿ ಹಾಕಬೇಕು ಎಂದು ತಿಳಿಸಿದೆ.
ಜಾತ್ರೆ, ರಥೋತ್ಸವ, ಪಲ್ಲಕ್ಕಿ ಉತ್ಸವ, ತೆಪ್ಪದ ತೇರು, ಉರುಸ್ ಅಥವಾ ಯಾವುದೇ ಧರ್ಮ, ಜಾತಿ ಅಥವಾ ಪಂಥಕ್ಕೆ ಸಂಬಂಧಿಸಿದ ಯಾವುದೇ ಧಾರ್ಮಿಕ ಕಾರ್ಯಕ್ರಮಗಳಿಗೆ ಈ ಕಾನೂನು ಅನ್ವಯ ಆಗುವುದಿಲ್ಲ.