ಹೊಸದಿಗಂತ ಡಿಜಿಟಲ್ ಡೆಸ್ಕ್:
ವಸತಿ ಇಲಾಖೆಯ ವಿವಿಧ ವಸತಿ ಸೌಲಭ್ಯ ಹಂಚಿಕೆ ಯೋಜನೆಗಳಲ್ಲಿ ಅಲ್ಪಸಂಖ್ಯಾತರಿಗೆ ಶೇಕಡ 15ರಷ್ಟು ಮೀಸಲಾತಿ ಕಲ್ಪಿಸಲು ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರ ಖಂಡನೀಯ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಬಿಜೆಪಿ ಕೇಂದ್ರ ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಅವರು, ರಾಜ್ಯ ಸರ್ಕಾರದ ಈ ನಿರ್ಧಾರದಿಂದ ಸಾಮಾನ್ಯ ಜನರು, ಪರಿಶಿಷ್ಟ ಸಮುದಾಯಗಳು ಮತ್ತು ಒಬಿಸಿ ಜನರ ಮೀಸಲಾತಿಗೆ ಧಕ್ಕೆಯಾಗಲಿದೆ ಎಂದು ಹೇಳಿದ್ದಾರೆ. ಯಾವುದೇ ಮಾದರಿ ಧರ್ಮ ಆಧಾರಿತ ಮೀಸಲಾತಿ ಕೊಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಆದರೂ ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಅಸಂವಿಧಾನಿಕ ಹಾಗೂ ಸಂವಿಧಾನ ವಿರೋಧಿ ನಿರ್ಧಾರ ಕೈಗೊಂಡಿದೆ. ತುಷ್ಠೀಕರಣದ ರಾಜಕಾರಣದಲ್ಲಿ ಇತರ ಸಮುದಾಯಗಳಿಗೆ ಅನ್ಯಾಯ ಮಾಡಿ ಧರ್ಮ ಆಧಾರಿತ ಮೀಸಲಾತಿ ಸಂಕಲ್ಪಿಸಿರುವುದು ಸರಿಯಲ್ಲ. ಇದರ ವಿರುದ್ಧ ಕಾನೂನಿನ ಹೋರಾಟ ಮಾಡುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಟೀಕಿಸಿದ್ದಾರೆ.