ಹೊಸದಿಗಂತ ಡಿಜಿಟಲ್ ಡೆಸ್ಕ್:
ಸುದೀಪ್ ಹೆಸರು ಹೇಳಿ ಖ್ಯಾತ ನಿರ್ದೇಶಕ ನಂದಕಿಶೋರ್ ವಿರುದ್ಧ 22 ಲಕ್ಷ ರೂ. ವಂಚನೆ ಆರೋಪ ಕೇಳಿ ಬಂದಿದೆ. 9 ವರ್ಷಗಳ ಹಿಂದೆ ನಂದ ಕಿಶೋರ್ ನನ್ನಿಂದ 22 ಲಕ್ಷ ರೂ. ಪಡೆದು ಈಗ ಹಣ ನೀಡದೇ ವಂಚಿಸಿದ್ದಾರೆ ಎಂದು ಯುವನಟ ಶಬರೀಶ್ ಶೆಟ್ಟಿ ಆರೋಪಿಸಿದ್ದಾರೆ.
9 ವರ್ಷಗಳ ಹಿಂದೆ ನಂದಕಿಶೋರ್ 22 ಲಕ್ಷ ರೂ. ಪಡೆದಿದ್ದರು. ದುಡ್ಡು ಕೊಡುವಂತೆ ಕೇಳಿದಾಗ ಚಿತ್ರಗಳಲ್ಲಿ ನಟಿಸುವ ಆಫರ್ ನೀಡಿದ್ದರು. ಆದರೆ ನನಗೆ ಯಾವುದೇ ಆಫರ್ ನೀಡಿರಲಿಲ್ಲ.
ಈ ವಿಚಾರವನ್ನು ನಾನು ನಟ ಸುದೀಪ್ ಅವರ ಗಮನಕ್ಕೆ ತರಲು ಮುಂದಾಗಿದ್ದೆ. ಈ ವೇಳೆ ಸುದೀಪ್ ಬಳಿ ಹೇಳದಂತೆ ತಡೆಯುತ್ತಿದ್ದರು. ನಾನು ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಆಡುವ ಕನಸ್ಸು ಕಟ್ಟಿಕೊಂಡಿದ್ದೆ. ಕನ್ನಡ ಚಲನಚಿತ್ರ ಕಪ್ (ಕೆಸಿಸಿ)ಟೂರ್ನಿಯಲ್ಲಿ ನಾನು ಎರಡು ಸೀಸನ್ ಆಡಿದ್ದೇನೆ. ಹಣ ಕೇಳಿದರೆ ನಿನ್ನನ್ನು ಕೆಸಿಸಿಯಿಂದ ಹೊರ ಹಾಕುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದರು.
ನಾನು ಸುದೀಪ್ ಸರ್ ಜೊತೆ ಕ್ರಿಕೆಟ್ ಆಡುವ ಆಸೆಯಿಂದ ಸುಮ್ಮನಾಗುತ್ತಿದ್ದೆ. ಈಗ ನನ್ನ ರಾಮಧೂತ ಸಿನಿಮಾ ಶೂಟಿಂಗ್ ಮುಕ್ತಾಯವಾಗಿದೆ. ಸಿನಿಮಾ ರಿಲೀಸ್ ಮಾಡಲು ನನ್ನ ಬಳಿ ಹಣ ಇಲ್ಲ. ನನ್ನ ಹಣ ವಾಪಸ್ ಕೊಡಿ ಎಂದು ಕೇಳಿದರೆ ಏನ್ ಮಾಡಿಕೊಳ್ಳುತ್ತೀಯೋ ಮಾಡು ಎನ್ನುತ್ತಿದ್ದಾರೆ ಎಂದು ದೂರಿದ್ದಾರೆ.