ಬಿಹಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ: ನೀರು, ಇಂಧನ, ರೈಲ್ವೆ ಸಹಿತ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಧಾನಿ ನರೇಂದ್ರ ಮೋದಿ ಬಿಹಾರದ ಸಿವಾನ್ ನಲ್ಲಿಂದು ನೀರು, ಇಂಧನ ಹಾಗೂ ರೈಲ್ವೆ ಸೇರಿದಂತೆ ವಿವಿಧ ಮೂಲಸೌಕರ್ಯ ವಲಯಗಳಿಗೆ ಸಂಬಂಧಿಸಿದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು.

ಪ್ರಧಾನಮಂತ್ರಿ ಆವಾಸ್ ಯೋಜನೆಯ ಫಲಾನುಭವಿಗಳಿಗೆ ಮೊದಲ ಕಂತನ್ನು ಬಿಡುಗಡೆ ಮಾಡಿದರು. ವಂದೇ ಭಾರತ್ ರೈಲಿಗೆ ಹಸಿರು ನಿಶಾನೆ ತೋರಿದರು. ಸಮಾರಂಭದಲ್ಲಿ ಬಿಹಾರ ರಾಜ್ಯಪಾಲ ಆರಿಫ್ ಮೊಹಮದ್ ಖಾನ್, ಮುಖ್ಯಮಂತ್ರಿ ನಿತೀಶ್ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸಮಾರಂಭ ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಅಭಿವೃದ್ಧಿ ಯೋಜನೆಗಳಿಂದ ಹಿಂದುಳಿದವರು, ವಂಚಿತರು ಸೇರಿದಂತೆ ಸಮಾಜದ ಎಲ್ಲ ವರ್ಗದ ಜನರ ಜೀವನ ಸುಗಮವಾಗಲಿದೆ. ಉದ್ಯೋಗಾವಕಾಶಗಳು ನಿರ್ಮಾಣವಾಗಲಿವೆ ಎಂದು ಹೇಳಿದರು. ಭಾರತದ ಪ್ರಗತಿಯಿಂದ ವಿಶ್ವದ ಮುಂದುವರಿದ ದೇಶಗಳು ಪ್ರಭಾವಿತಗೊಂಡಿವೆ. ಭಾರತ ಜಗತ್ತಿನ 3ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆಯುವುದನ್ನು ನೋಡುತ್ತಿವೆ. ಎನ್ ಡಿಎ ಸರ್ಕಾರ ದೇಶದ ಎಲ್ಲ ರಾಜ್ಯಗಳ ಪ್ರಗತಿಗೆ ಆದ್ಯತೆ ನೀಡಿದ್ದು, ಬಿಹಾರವನ್ನು ಮತ್ತೊಮ್ಮೆ ಅಭಿವೃದ್ಧಿಯ ಪಥಕ್ಕೆ ಮರಳಿ ತಂದಿದೆ ಎಂದು ತಿಳಿಸಿದರು.

ಕಳೆದ 10 ವರ್ಷಗಳಲ್ಲಿ ದೇಶದ ಗ್ರಾಮೀಣ ರಸ್ತೆಗಳ ನಿರ್ಮಾಣ, ಬಡವರಿಗೆ ಮನೆ, ವಿದ್ಯುತ್, ನೀರು ಮುಂತಾದ ಸೌಕರ್ಯ ಕಲ್ಪಿಸಲು ಸರ್ಕಾರ ಶ್ರಮಿಸಿದೆ. ಬಡತನದ ಪ್ರಮಾಣವನ್ನು ಕಡಿಮೆ ಮಾಡಲು ಸಾಧ್ಯ ಎನ್ನುವುದನ್ನು ನಮ್ಮ ಸರ್ಕಾರ ಸಾಬೀತುಪಡಿಸಿದೆ. 25 ಕೋಟಿ ಜನರನ್ನು ಬಡತನದ ವ್ಯಾಪ್ತಿಯಿಂದ ಹೊರತರಲಾಗಿದ್ದು, ವಿಶ್ವದ ಪ್ರಮುಖ ಆರ್ಥಿಕ ಸಂಸ್ಥೆಗಳು ಭಾರತದ ಈ ಪ್ರಗತಿಯನ್ನು ಶ್ಲಾಘಿಸಿವೆ ಎಂದು ಹೇಳಿದರು. ಕಳೆದ ದಶಕದಲ್ಲಿ ಬಡವರಿಗೆ 4 ಕೋಟಿಗೂ ಅಧಿಕ ಮನೆಗಳನ್ನು ನಿರ್ಮಿಸಲಾಗಿದೆ. ಪ್ರಸ್ತುತ 3 ಕೋಟಿ ಮನೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. 12 ಕೋಟಿಗೂ ಅಧಿಕ ಮನೆಗಳಿಗೆ ನೀರಿನ ಸೌಲಭ್ಯ ಕಲ್ಪಿಸಲಾಗಿದೆ. ಗ್ರಾಮೀಣ ಕುಟುಂಬಗಳಿಗೆ ನಲ್ಲಿ ನೀರು ವ್ಯವಸ್ಥೆ, ನಗರಗಳಲ್ಲಿ ಸ್ವಚ್ಛ ಕುಡಿಯುವ ನೀರು ಪೂರೈಸಲು ಸರ್ಕಾರ ಕಾರ್ಯ ನಿರ್ವಹಿಸುತ್ತಿದೆ. ಸಬ್ ಕಾ ಸಾಥ್ – ಸಬ್ ಕಾ ವಿಕಾಸ್ ಧ್ಯೇಯದ ಮೇಲೆ ಎಲ್ಲರ ಪ್ರಗತಿಗೆ ಉತ್ತೇಜನ ನೀಡುತ್ತಿದೆ ಎಂದು ಹೇಳಿದರು.

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಎನ್ ಡಿಎ ಸರ್ಕಾರ ಜನರಿಗೆ ಮೂಲಸೌಕರ್ಯ ಕಲ್ಪಿಸಲು ಬದ್ಧವಾಗಿದೆ. ರಸ್ತೆ, ರೈಲ್ವೆ ಸಂಪರ್ಕ ಸೇರಿದಂತೆ ಜನರ ಜೀವನವನ್ನು ಸುಗಮಗೊಳಿಸುವ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!