ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೈಸೂರಿನಲ್ಲಿಂದು ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಖಾತೆ ಸಚಿವ ಡಾ. ಎಚ್ ಸಿ ಮಹದೇವಪ್ಪ 219 ಪೌರ ಕಾರ್ಮಿಕರಿಗೆ ಖಾಯಂ ನೇಮಕಾತಿ ಪತ್ರಗಳನ್ನು ವಿತರಿಸಿದರು.
ಈ ವೇಳೆ, ಶಾಸಕ ತನ್ವೀರ್ ಸೇಠ್, ಪೌರಕಾರ್ಮಿಕ ಸಂಘಟನೆ ರಾಜ್ಯಾಧ್ಯಕ್ಷ ಎ. ನಾರಾಯಣ ಮತ್ತಿತರರು ಉಪಸ್ಥಿತರಿದ್ದರು. ಬಳಿಕ ಡಾ. ಎಚ್. ಸಿ. ಮಹದೇವಪ್ಪ, ರಾಜ್ಯದಲ್ಲಿ 32 ಸಾವಿರ ಪೌರಕಾರ್ಮಿಕರನ್ನು ಖಾಯಂಗೊಳಿಸುವ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಸರ್ಕಾರಿ ನೌಕರರಿಗೆ ಸಿಗುವ ಸವಲತ್ತುಗಳನ್ನು ಮುಂದಿನ ದಿನಗಳಲ್ಲಿ ಪೌರ ಕಾರ್ಮಿಕರಿಗೆ ನೀಡುವ ಆಲೋಚನೆಯಿದೆ.
ಈ ಸಂಧರ್ಭ ಮಾತನಾಡಿದ ಪೌರ ಕಾರ್ಮಿಕರಾದ ಪಾರ್ವತಿ, ಖಾಯಂ ನೇಮಕಾತಿಯಿಂದ ಮುಂದಿನ ಜೀವನಕ್ಕೆ ಅನುಕೂಲವಾಗಿದೆ ಎಂದು ತಿಳಿಸಿದರು. ಇಂದ್ರಮ್ಮ, ಸೇವೆ ಖಾಯಾಮತಿ ಸಂತಸ ತಂದಿದೆ ಎಂದರು. ರಾಮಾಂಜನಯ್ಯ ಮಾತನಾಡಿ, ಗುತ್ತಿಗೆ ಆಧಾರದಲ್ಲಿ ಕಡಿಮೆ ಸಂಬಳಕ್ಕೆ ಕಾರ್ಯ ನಿರ್ವಹಿಸುತ್ತಿದ್ದೆವು. ಇದೀಗ ಕೆಲಸ ಖಾಯಂ ಆಗಿದ್ದು, ಉತ್ತಮ ಜೀವನಕ್ಕೆ ಸಹಕಾರಿಯಾಗಿದೆ ಎಂದು ಹೇಳಿದರು. ಎ. ನಾರಾಯಣ ಮಾತನಾಡಿ, ಮೈಸೂರಿಗೆ ಮೂರು ಬಾರಿ ಸ್ವಚ್ಛ ನಗರ ಪುರಸ್ಕಾರ ಸಂದಿದ್ದು, ಈ ಸಾಧನೆಯಲ್ಲಿ ಪೌರಕಾರ್ಮಿಕರ ಪಾತ್ರ ಪ್ರಮುಖವಾಗಿದೆ ಎಂದು ತಿಳಿಸಿದರು.