ಹೊಸದಿಗಂತ ವರದಿ ಹಾಸನ:
ಜಿಲ್ಲೆಯ ಮಲೆನಾಡು ಮತ್ತು ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ ಸಕಲೇಶಪುರ ತಾಲೂಕಿನ ಯಡಕುಮರಿ ಬಳಿ ರೈಲ್ವೆ ಹಳಿಯ ಮೇಲೆ ಗುಡ್ಡ ಕುಸಿದಿದೆ. ಇದರ ಅರಿವಿಲ್ಲದೆ ರಾತ್ರಿ ರೈಲು ಬಂಡೆ ಕುಸಿದಿರುವ ಸ್ಥಳದವರೆಗೆ ಬಂದಿದ್ದು, ಚಾಲಕನ ಸಮಯ ಪ್ರಜ್ಞೆಯಿಂದ ಅವಘಡ ತಪ್ಪಿದೆ.
ಯಡಕುಮರಿ ಕಿಲೋಮೀಟರ್ 74 ಮತ್ತು 75ರ ಬಳಿ ಈ ಘಟನೆ ಸಂಭವಿಸಿದ್ದು, ಚಾಲಕ ಹಳಿ ಮೇಲೆ ಬಂಡೆಗಳು ಕಾಣಿಸಿದ್ದರಿಂದ ತುರ್ತಾಗಿ ರೈಲು ನಿಲ್ಲಿಸಿದ್ದಾರೆ. ಇಲ್ಲವಾದರೆ ಇಂಜಿನ್ ಬಂಡೆಗೆ ಗುದ್ದಿ ಭಾರೀ ಅವಘಡ ಸಂಭವಿಸುವ ಅಪಾಯವಿತ್ತು. ಘಟನೆಯಿಂದ ರೈಲು ಹಳಿಗೂ ಹಾನಿಯಾಗಿದೆ. ಬೆಂಗಳೂರು-ಕಣ್ಣೂರು ಘಾಟ್ ಮತ್ತು ಬೆಂಗಳೂರು-ಮುರುಡೇಶ್ವರ ರೈಲುಗಳ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.
ಯಡಕುಮರಿ ಮತ್ತು ಶಿರಿಬಾಗಿಲು ನಿಲ್ದಾಣಗಳ ನಡುವೆ ಕಲ್ಲುಗಳು ಟ್ರ್ಯಾಕ್ ಮೇಲೆ ಬಿದ್ದಿರುವ ಕಾರಣ, ರೈಲು ಸಂಖ್ಯೆ 16511 ಅನ್ನು ಕಡಗರವಳ್ಳಿಯಲ್ಲಿ ಹಾಗೂ ರೈಲು ಸಂಖ್ಯೆ 16585 ಮತ್ತು 07377 ಅನ್ನು ಸಕಲೇಶಪುರದಲ್ಲೇ ನಿಲ್ಲಿಸಲಾಗಿದೆ. ಅರೆಬೆಟ್ಟ ಮತ್ತು ಯಡಕುಮಾರಿ ಮಧ್ಯ ಭಾಗದಲ್ಲಿ ಗುಡ್ಡ ಕುಸಿತವಾಗಿದ್ದು, ರೈಲ್ವೆ ಸಿಬ್ಬಂದಿಗಳು ಗುಡ್ಡ ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ಮಾರ್ಗಮಧ್ಯ ಸಿಕ್ಕಿಹಾಕಿಕೊಂಡಿರುವ ಪ್ರಯಾಣಿಕರಿಗೆ ರೈಲ್ವೆ ಇಲಾಖೆಯಿಂದ ಕುಡಿಯುವ ನೀರು, ಬಿಸ್ಕತ್ತು, ಉಪಾಹಾರ ಮತ್ತು ಚಹಾದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ರೈಲು ಸಂಚಾರ ಶೀಘ್ರದಲ್ಲಿ ಸಾಮಾನ್ಯ ಸ್ಥಿತಿಗೆ ಮರಳುವಂತೆ ಮಾಡಲು ರೈಲ್ವೆ ಇಲಾಖೆ ತೀವ್ರಗತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಆದರೆ ನಿಗದಿತ ಸಮಯದಲ್ಲಿ ಗಮ್ಯ ತಲುಪಲು ಆಗದೆ ಪ್ರಯಾಣಿಕರು ಪರದಾಡುವಂತಾಗಿದೆ.