ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಂಘರ್ಷ ಪೀಡಿತ ಇರಾನ್ ನಲ್ಲಿನ ಭಾರತೀಯ ವಿದ್ಯಾರ್ಥಿಗಳ ಸುರಕ್ಷಿತ ರವಾನೆಗೆ ಸ್ಪಂದಿಸಿರುವ ಇರಾನ್ ಸರ್ಕಾರ ತನ್ನ ವಾಯುಪ್ರದೇಶ ತೆರೆದಿದ್ದು, ನಾವು ಭಾರತೀಯರನ್ನು ನಮ್ಮ ಸ್ವಂತ ಜನರೆಂದು ಪರಿಗಣಿಸುತ್ತೇವೆ ಎಂದು ಹೇಳಿದೆ.
ಸಂಘರ್ಷ ಪೀಡಿತ ಇರಾನ್‌ನಿಂದ ಭಾರತೀಯ ವಿದ್ಯಾರ್ಥಿಗಳನ್ನು ಕರೆದೊಯ್ಯುವ ಮೂರು ಚಾರ್ಟರ್ಡ್ ಸ್ಥಳಾಂತರಿಸುವ ವಿಮಾನಗಳ ಪೈಕಿ ಮೊದಲನೆಯದು ಭಾರತದ ಆಪರೇಷನ್ ಸಿಂಧು ರಕ್ಷಣಾ ಪ್ರಯತ್ನದ ಭಾಗವಾಗಿ ಶುಕ್ರವಾರ ತಡರಾತ್ರಿ ದೆಹಲಿಯಲ್ಲಿ ಸುರಕ್ಷಿತವಾಗಿ ಬಂದಿಳಿದಿದೆ.
ಈ ಬೆಳವಣಿಗೆ ಬೆನ್ನಲ್ಲೇ ದೆಹಲಿಯಲ್ಲಿರುವ ಇರಾನಿನ ರಾಯಭಾರ ಕಚೇರಿಯ ಉಪ ಮುಖ್ಯಸ್ಥ ಮೊಹಮ್ಮದ್ ಜಾವದ್ ಹೊಸೇನಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ್ದು, ನಾವು ಭಾರತೀಯರನ್ನು ನಮ್ಮ ಸ್ವಂತ ಜನರು ಎಂದು ಪರಿಗಣಿಸುತ್ತೇವೆ. ಇರಾನ್‌ನ ವಾಯುಪ್ರದೇಶವನ್ನು ಮುಚ್ಚಲಾಗಿದೆ. ಆದರೆ ಈ ಸಮಸ್ಯೆಯಿಂದಾಗಿ, ಭಾರತೀಯ ಪ್ರಜೆಗಳ ಸುರಕ್ಷಿತ ಪ್ರಯಾಣಕ್ಕಾಗಿ ಅದನ್ನು ತೆರೆಯಲು ನಾವು ವ್ಯವಸ್ಥೆಗಳನ್ನು ಮಾಡುತ್ತಿದ್ದೇವೆ ಎಂದು ಹೇಳಿದರು.