ಯುವಜನತೆಯ ನಡುವೆ ಬಹುಮಟ್ಟಿಗೆ ಜನಪ್ರಿಯರಾಗಿರುವ ಮತ್ತು ಹಲವು ಬಾರಿ ವಿವಾದಗಳಿಗೆ ಒಳಗಾದ ಯೂಟ್ಯೂಬರ್ ರಣವೀರ್ ಅಲಹಾಬಾದಿಯಾ ಇದೀಗ ದಕ್ಷಿಣ ಕನ್ನಡದ ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಭೇಟಿ ನೀಡಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ತನ್ನ ದೇವಾಲಯ ದರ್ಶನದ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
ರಣವೀರ್, ಪಂಚೆ ಹಾಗೂ ಶಲ್ಯ ಧರಿಸಿ ದೇವಾಲಯದ ಮುಂದಿನ ಭಾಗದಲ್ಲಿ ನಿಂತು ತೆಗೆಸಿದ ಚಿತ್ರಗಳನ್ನ ಇನ್ಸ್ಟಾಗ್ರಾಂ ಸ್ಟೋರಿಗಳ ಮೂಲಕ ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೆ, “King Energy”, “ಭಾರತದಲ್ಲಿದ್ದರೆ ಮಾತ್ರ ಇಂತಹ ಅನುಭವಗಳು ಸಾಧ್ಯ” ಹಾಗೂ “ಎಲ್ಲಾ ಕಡೆಗಳಿಂದ ಆಶೀರ್ವಾದ ಸಿಗುತ್ತಿದೆ” ಎಂಬ ಮುಂತಾದ ಪದಗಳ ಮೂಲಕ ತಮ್ಮ ಭಾವನೆ ವ್ಯಕ್ತಪಡಿಸಿದ್ದಾರೆ. ಜೊತೆಗೆ “It’s time to settle down in Karnataka” (ಇದು ಕರ್ನಾಟಕದಲ್ಲಿ ನೆಲೆಸೋ ಸಮಯ) ಎಂದು ಬರೆದಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿ ಮಾಡುತ್ತಿದೆ.
ಈ ಚಿತ್ರಗಳನ್ನು ಕಂಡ ನೆಟ್ಟಿಗರು, “ತಪ್ಪು ಮಾಡುವುದು ಮಾನವ ಸ್ವಭಾವ, ಆದರೆ ತಪ್ಪನ್ನು ಅರಿತು ಸರಿಪಡಿಸಿಕೊಳ್ಳುವವನೇ ನಿಜವಾದ ಮನುಜ” ಎಂದು ಹೇಳಿದ್ದಾರೆ. “ಗಂಗೆಯಲ್ಲಿ ಮಿಂದರೆಲ್ಲ ಪಾಪ ಹೋಗಲ್ಲ, ಅದಕ್ಕೆ ತಾನೆ ತುಳುನಾಡಿಗೆ ಬಂದಿದ್ದಾರೆ” ಎಂದು ತಮಾಷೆಯಲ್ಲೇ ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ರಣವೀರ್ ಕಳೆದ ವರ್ಷ “ಇಂಡಿಯಾಸ್ ಗಾಟ್ ಟ್ಯಾಲೆಂಟ್ ” ಎಂಬ ಕಾರ್ಯಕ್ರಮದಲ್ಲಿ ಸ್ಪರ್ಧಿಯೊಬ್ಬರ ಮುಂದೆ ಅಶ್ಲೀಲ ಪ್ರಶ್ನೆ ಕೇಳಿದ ಕಾರಣ ಭಾರತದೆಲ್ಲೆಡೆ ಭಾರಿ ಟೀಕೆಗೊಳಗಾದ್ರು. ಇದರ ಬಳಿಕ ಅವರ ವಿರುದ್ಧ ಕಾನೂನು ಕ್ರಮಗಳು ಕೂಡ ಕೈಗೊಳ್ಳಲಾಗಿತ್ತು. ಮತ್ತೊಮ್ಮೆ , ಪಾಕಿಸ್ತಾನಕ್ಕೆ ಸಂಬಂಧಿಸಿದ ತಮ್ಮ ಸೋಶಿಯಲ್ ಮೀಡಿಯಾ ಪೋಸ್ಟ್ನಲ್ಲಿ “ಸಹೋದರ ಸಹೋದರಿಯರೆ” ಎಂಬ ಪದ ಬಳಸಿ ಮತ್ತೆ ಟೀಕೆಗೆ ಗುರಿಯಾದರು.