ಭಾರತೀಯ ಅಡುಗೆ ಮನೆಯಲ್ಲಿ ಎಣ್ಣೆ ಇಲ್ಲದೇ ಊಟ ತಯಾರಿಸೋದು ಅಸಾಧ್ಯ. ಎಣ್ಣೆ ಇಲ್ಲದ ಅಡುಗೆ ರುಚಿಯಾಗಿರಲ್ಲ ಅನ್ನೋದು ನಮ್ಮ ಭಾವನೆ. ಆದರೆ ನಾವು ಬಳಸುವ ಹೆಚ್ಚು ಸಂಸ್ಕರಿಸಿದ ಎಣ್ಣೆ ಆರೋಗ್ಯಕ್ಕೆ ಎಷ್ಟು ಅಪ್ಪಯ್ಯ ಗೊತ್ತಾ. ವೈದ್ಯಕೀಯ ವರದಿಗಳ ಪ್ರಕಾರ, ಎಣ್ಣೆಯ ಮಿತಿಮೀರಿದ ಬಳಕೆ ಹೃದಯಾಘಾತ, ಉನ್ನತ ರಕ್ತದೊತ್ತಡ (ಬಿಪಿ), ಕೊಲೆಸ್ಟ್ರಾಲ್, ಲಿವರ್ ಡ್ಯಾಮೇಜ್ ಮುಂತಾದ ಹಲವಾರು ಕಾಯಿಲೆಗಳ ಮೂಲ ಕಾರಣವಾಗುತ್ತದೆ.
ಇತ್ತೀಚೆಗೆ ನಡೆದ ಸಂಶೋಧನೆಯೊಂದು, ಪದೇ ಪದೇ ಬಿಸಿ ಮಾಡಿ ಎಣ್ಣೆಯನ್ನು ಮರುಬಳಕೆ ಮಾಡುವುದರಿಂದ ಲಿವರ್ನ ಮೇಲೆ ಕೆಟ್ಟ ಪರಿಣಾಮಗಳುಂಟಾಗಬಹುದು ಎಂಬುದನ್ನು ದೃಢಪಡಿಸಿದೆ. ಇಂತಹ ಸಮಯದಲ್ಲಿ ಎಣ್ಣೆಯ ಸ್ಮಾರ್ಟ್ ಆಯ್ಕೆ ನಮ್ಮ ದೇಹದ ಆರೋಗ್ಯಕ್ಕೆ ಬಹುಮಟ್ಟಿಗೆ ರಕ್ಷಣೆ ನೀಡಬಹುದು.
ತುಪ್ಪ:
ವಿಟಮಿನ್ A, D, E, K ಹೊಂದಿರುವ ತುಪ್ಪ ದೇಹದ ಜೀರ್ಣಕ್ರಿಯೆ ಹಾಗೂ ರೋಗ ನಿರೋಧಕ ಶಕ್ತಿಗೆ ಸಹಾಯ ಮಾಡುತ್ತದೆ. ತುಪ್ಪ ನಮ್ಮ ದೇಶದ ಜನರ ಎಮೋಷನ್ ಆಗಿದ್ರು ಮಿತವಾಗಿ ಬಳಸಿದರೆ ಮಾತ್ರ ಅದರ ಲಾಭ ಸಿಗೋದು.
ತೆಂಗಿನ ಎಣ್ಣೆ:
ಮಧ್ಯಮ ಸರಪಳಿ ಟ್ರೈಗ್ಲಿಸರೈಡ್ (MCTs) ಇರುವ ಈ ಎಣ್ಣೆ ತ್ವರಿತ ಶಕ್ತಿಯ ಮೂಲ. ಮಿದುಳು ಹಾಗೂ ಕರುಳಿಗೆ ಉತ್ತಮ.
ಸಾಸಿವೆ ಎಣ್ಣೆ:
ಉರಿಯೂತ ಕಡಿಮೆ ಮಾಡುವುದು, ಹೃದಯದ ಆರೋಗ್ಯ ಹೆಚ್ಚಿಸುವುದು ಇದರ ಮುಖ್ಯ ಲಾಭ. ಒಮೆಗಾ-5 ಕೊಬ್ಬಿನಾಮ್ಲಗಳು ಈ ಎಣ್ಣೆಗೆ ಸ್ಪಷ್ಟವಾದ ಆರೋಗ್ಯ ಲಾಭ ನೀಡುತ್ತವೆ.
ಎಳ್ಳೆಣ್ಣೆ:
ಆಂಟಿ-ಆಕ್ಸಿಡೆಂಟ್ ಹಾಗೂ ಆರೋಗ್ಯಕರ ಕೊಬ್ಬುಗಳಿಂದ ಸಮೃದ್ಧ. ಇದು ಕೀಲು, ಚರ್ಮದ ಆರೋಗ್ಯಕ್ಕೂ ಉತ್ತಮ.
ಕಡಲೆಕಾಯಿ ಎಣ್ಣೆ:
ಸಸ್ಯ ಮೂಲದ ಸ್ಟೆರಾಲ್ಗಳಿಂದ ತುಂಬಿರುವ ಈ ಎಣ್ಣೆ, ಹೃದಯ ಸ್ನೇಹಿ ಎಣ್ಣೆಗಳಲ್ಲಿ ಒಂದಾಗಿದೆ. ದಿನನಿತ್ಯದ ಅಡುಗೆಗೆ ಮಿತವಾಗಿ ಬಳಸಬಹುದು.
ಹೆಚ್ಚಾಗಿ ಜನರು ಬಳಸುವ ಪಾಮ್ ಆಯಿಲ್, ಸೋಯಾಬೀನ್ ಎಣ್ಣೆ, ಸೂರ್ಯಕಾಂತಿ ಎಣ್ಣೆ ಇವುಗಳನ್ನು ವೈದ್ಯರು ಹೆಚ್ಚು ಸಂಸ್ಕರಣೆಯ ಕಾರಣದಿಂದ ಬಳಸದೇ ಇರುವಂತೆ ಎಚ್ಚರಿಸುತ್ತಾರೆ. ಅಡುಗೆಯಲ್ಲಿ ಎಣ್ಣೆ ಬಳಕೆ ಅಷ್ಟೇನೂ ತಪ್ಪಲ್ಲ. ಆದರೆ ಅದು ಯಾವ ಎಣ್ಣೆ ಎಂಬುದರ ಆಯ್ಕೆ, ಅದರ ಪ್ರಮಾಣ ಮತ್ತು ಗುಣಮಟ್ಟವೇ ನಮ್ಮ ಆರೋಗ್ಯವನ್ನು ನಿರ್ಧರಿಸುತ್ತದೆ.