ಮಳೆಗಾಲದ ತಂಪು ವಾತಾವರಣ, ಕಡಿಮೆ ಉಷ್ಣತೆ ಮತ್ತು ಹೆಚ್ಚಿದ ತೇವಾಂಶವು ನೈಸರ್ಗಿಕವಾಗಿ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳ ಪ್ರಸರಣಕ್ಕೆ ಅನುಕೂಲವಾಗುತ್ತದೆ. ಈ ಕಾಲದಲ್ಲಿ ಆಹಾರದ ಸೂಕ್ತ ಸಂಗ್ರಹಣೆ, ನೈರ್ಮಲ್ಯ ಮತ್ತು ತಯಾರಿಕೆ ವಿಧಾನಗಳಲ್ಲಿ ಕಡೆಗಣನೆ ಮಾಡಿದರೆ, ಫುಡ್ ಪಾಯ್ಸನಿಂಗ್ (Food Poisoning) ಹೆಚ್ಚುತ್ತದೆ.
ಹೊಟ್ಟೆನೋವು, ವಾಂತಿ, ಅತಿಸಾರ ಮೊದಲಾದ ತೀವ್ರ ಸಮಸ್ಯೆಗಳು ಜನರ ಆರೋಗ್ಯದ ಮೇಲೆ ಭಾರಿ ಪರಿಣಾಮ ಬೀರಬಹುದು. ಹೀಗಾಗಿ ಈ ಋತುವಿನಲ್ಲಿ ಯಾವ ಆಹಾರಗಳನ್ನು ತಿನ್ನುವುದನ್ನು ತಪ್ಪಿಸಬೇಕು, ಯಾವುದನ್ನು ಎಚ್ಚರಿಕೆಯಿಂದ ಸೇವಿಸಬೇಕು ಎಂಬ ಬಗ್ಗೆ ಅರಿವು ಬೇಕಾಗುತ್ತದೆ. ಮಳೆಗಾಲದಲ್ಲಿ ಫುಡ್ ಪಾಯ್ಸನಿಂಗ್ ಉಂಟು ಮಾಡುವ ಅತ್ಯಂತ ಸಾಮಾನ್ಯ 5 ಆಹಾರಗಳು, ಅವುಗಳ ಅಪಾಯಗಳ ಬಗ್ಗೆ ವಿವರ ಇಲ್ಲಿದೆ ನೋಡಿ.
ಸೌತೆಕಾಯಿ (Cucumber)
ಸೌತೆಕಾಯಿ ಸಾಮಾನ್ಯವಾಗಿ ಶೀತಲತೆಯನ್ನು ನೀಡುವ ಆಹಾರವಾಗಿದ್ದು, ಆರೋಗ್ಯಕ್ಕೆ ಹಿತಕರ. ಆದರೆ ಮಳೆಗಾಲದಲ್ಲಿ ಇದನ್ನು ಸೇವಿಸುವುದು ಅಪಾಯಕಾರಿಯಾಗಬಹುದು. ಮಣ್ಣಿನಲ್ಲಿ ಅಥವಾ ನೀರಿನಲ್ಲಿ ಇರುವ ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾ ಈ ತರಕಾರಿಗೆ ತಗಲಬಹುದಾದ ಕಾರಣ, ಇದು ಫುಡ್ ಪಾಯ್ಸನಿಂಗ್‌ಗೆ ದಾರಿ ಮಾಡಿಕೊಡಬಹುದು.
ಹಸಿ ಹಾಲು (Raw Milk)
ಪಾಶ್ಚರೀಕರಿಸದ ಹಸಿ ಹಾಲುಗಳಲ್ಲಿ ಸಾಲ್ಮೊನೆಲ್ಲಾ, ಇ.ಕೋಲಿ, ಲಿಸ್ಟೇರಿಯಾ ಬ್ಯಾಕ್ಟೀರಿಯಾಗಳು ಕಂಡುಬರುತ್ತವೆ. ಇವು ಹೊಟ್ಟೆ ನೊವು, ವಾಂತಿ, ತೀವ್ರ ಅತಿಸಾರಕ್ಕೆ ಕಾರಣವಾಗಬಹುದು. ಹಾಲನ್ನು ಪಾಶ್ಚರೀಕರಿಸದೆ ಸೇವಿಸಿದರೆ, ಮಕ್ಕಳಿಗೆ ಮತ್ತು ಗರ್ಭಿಣಿಯರಿಗೆ ಹೆಚ್ಚು ಅಪಾಯವಿದೆ.
ಮೊಟ್ಟೆಗಳು (Eggs)
ಸರಿಯಾಗಿ ಬೇಯಿಸದ ಅಥವಾ ಹಾಳಾದ ಮೊಟ್ಟೆಗಳು ಫುಡ್ ಪಾಯ್ಸನಿಂಗ್ ಗೆ ಕಾರಣವಾಗಬಹುದು. ಶುದ್ಧ ಮತ್ತು ಬಿರುಕು ಬಿಟ್ಟ ಮೊಟ್ಟೆಗಳ ಚಿಪ್ಪುಗಳು ಸಹ ಸಾಲ್ಮೊನೆಲ್ಲಾದಂತಹ ಹಾನಿಕಾರಕ ಬ್ಯಾಕ್ಟೀರಿಯಾಗಳಿಂದ ತುಂಬಿರಬಹುದು ಎಂದು ವೈದ್ಯರು ಹೇಳುತ್ತಾರೆ. ಕೋಣೆಯ ತಾಪಮಾನದಲ್ಲಿ ಮೊಟ್ಟೆ ಇಡುವುದೂ ಅಪಾಯವನ್ನು ಹೆಚ್ಚಿಸುತ್ತದೆ.
ಈರುಳ್ಳಿ (Onion)
ಹಸಿ ಈರುಳ್ಳಿಯನ್ನು ನೇರವಾಗಿ ಸೇವಿಸುವುದರಿಂದ ಬ್ಯಾಕ್ಟೀರಿಯಾ ತಕ್ಷಣ ಹೊಟ್ಟೆಗೆ ಸೇರುತ್ತವೆ. ಬೆಳೆಯುವ ಹಂತದಲ್ಲೇ ಮಣ್ಣು ಅಥವಾ ನೀರಿನಿಂದ ಸೋಂಕು ತಗಲಬಹುದರಿಂದ, ಈರುಳ್ಳಿಯನ್ನು ಚೆನ್ನಾಗಿ ತೊಳೆದು ಉಪಯೋಗಿಸಬೇಕು.
ಎಲೆಗಳ ಸೊಪ್ಪುಗಳು (Leafy Greens)
ಹಸಿರು ಎಲೆ ಸೊಪ್ಪುಗಳಲ್ಲಿ ಇರುವ ಇ.ಕೋಲಿ, ಲಿಸ್ಟೆರಿಯಾ ಬಾಕ್ಟೀರಿಯಾಗಳು ಫುಡ್ ಪಾಯ್ಸನಿಂಗ್‌ಗೆ ಕಾರಣವಾಗಬಹುದು. ಇವು ಸಾಮಾನ್ಯವಾಗಿ ಅಶುದ್ಧ ನೀರು ಅಥವಾ ನಿರ್ವಹಣೆಯಿಂದ ಉಂಟಾಗುತ್ತವೆ.
ಈ ಆಹಾರಗಳು ಸರ್ವಥಾ ತಿನ್ನಬಾರದು ಎಂಬುದಲ್ಲ. ಆದರೆ ಮಳೆಗಾಲದಲ್ಲಿ ಇವುಗಳನ್ನು ತಯಾರಿಸುವಾಗ ಹೆಚ್ಚು ಎಚ್ಚರಿಕೆಯಿಂದ ತೊಳೆಯುವುದು, ಬೇಯಿಸುವುದು ಮತ್ತು ಸಂಗ್ರಹಿಸುವುದು ಆರೋಗ್ಯ ರಕ್ಷಣೆಗಾಗಿ ಅತ್ಯಂತ ಅಗತ್ಯ. (ಸಾಮಾಜಿಕ ಜಾಲತಾಣದಲ್ಲಿ ದೊರೆತ ಮಾಹಿತಿಯ ಆಧಾರದ ಮೇಲೆ ಈ ಲೇಖನ ಪ್ರಕಟವಾಗಿದೆ)