ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದೋರ್ ಮೂಲದ ಉದ್ಯಮಿ ರಾಜಾ ರಘುವಂಶಿ ಅವರ ಸಂಚುಪೂರ್ವಕ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವನನ್ನು ಬಂಧಿಸಲಾಗಿದೆ. ಈ ಪ್ರಕರಣದ ಪರಿಶೀಲನೆ ನಡೆಸುತ್ತಿರುವ ಮೆಘಾಲಯ ಪೊಲೀಸರ ವಿಶೇಷ ತನಿಖಾ ತಂಡ (SIT) ಭಾನುವಾರ ಮಧ್ಯಪ್ರದೇಶದ ದೇವಾಸ್ ಜಿಲ್ಲೆಯಲ್ಲಿ ಭದ್ರತಾ ಸಿಬ್ಬಂದಿ ಬಲ್ಲಾ ಅಹಿರ್ವರ್ ಅನ್ನು ಬಂಧಿಸಿದೆ. ಹತ್ಯೆ ಬಳಿಕ, ಮೃತರ ಪತ್ನಿ ಸೋನಮ್ ರಘುವಂಶಿಯ ಬ್ಯಾಗ್ ಅನ್ನು ಅಹಿರ್ವರ್ ಇಂದೋರ್‌ನ ಫ್ಲಾಟ್‌ನಲ್ಲಿ ಬಚ್ಚಿಟ್ಟಿದ್ದ ಎನ್ನಲಾಗಿದೆ.
ಆಶ್ಚರ್ಯಕರ ಸಂಗತಿಯೆಂದರೆ, ಆ ಫ್ಲಾಟ್ ಸಿಲೋಮ್ ಜೇಮ್ಸ್ ಎಂಬುವರ ಹೆಸರಿನಲ್ಲಿ ಬಾಡಿಗೆಗೆ ತೆಗೆದುಕೊಳ್ಳಲಾಗಿತ್ತು. ಇದೇ ಫ್ಲಾಟ್‌ನಲ್ಲಿ ಸೋನಮ್ ತಂಗಿದ್ದಾಳೆ ಎನ್ನಲಾಗಿದೆ. ಶನಿವಾರ ರಾತ್ರಿ ಭೋನ್ರಾಸಾ ಟೋಲ್‌ಗೇಟ್ ಬಳಿ ಭೋಪಾಲ್‌ಗೆ ಪರಾರಿಯಾಗಲು ಯತ್ನಿಸುತ್ತಿದ್ದ ಬಲ್ಲಾ ಅಹಿರ್ವರ್ ಅನ್ನು ಪೊಲೀಸರು ಬಂಧಿಸಿದ್ದಾರೆ. ಇಲ್ಲಿ ತನಕ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ವ್ಯಕ್ತಿಗಳ ಸಂಖ್ಯೆ ಏಳು ಆಗಿದೆ.
ಮೇ 1ರಂದು ರಾಜಾ ರಘುವಂಶಿ ಮತ್ತು ಸೋನಮ್ ವಿವಾಹವಾಗಿದ್ದರು. ಮಧುಚಂದ್ರಕ್ಕಾಗಿ ಮೆಘಾಲಯಕ್ಕೆ ತೆರಳಿದ ದಂಪತಿ ಮೇ 23ರಂದು ನಾಪತ್ತೆಯಾಗಿದ್ದರು. ಬಳಿಕ ಜೂನ್ 2ರಂದು ರಘುವಂಶಿಯ ಶವ ಶಿಲ್ಲಾಂಗ್ ಸಮೀಪದ ಜಲಪಾತವೊಂದರಲ್ಲಿ ಪತ್ತೆಯಾಗಿತ್ತು.