ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಲಯಾಳಂ ನಟ, ಹಾಗೂ ಕೇಂದ್ರ ಸಚಿವ ಸುರೇಶ್ ಗೋಪಿ ನಟನೆಯ ‘ಜಾನಕಿ vs ಸ್ಟೇಟ್ ಆಫ್ ಕೇರಳ’ ಚಿತ್ರಕ್ಕೆ ಸೆನ್ಸಾರ್ ಮಂಡಳಿ ತಡೆ ಒಡ್ಡಿದೆ.
ಸಿನಿಮಾದ ಟೈಟಲ್ ಬದಲಿಸುವಂತೆ ಸೂಚಿಸುತ್ತಿದೆ. ಆದರೆ, ಇದಕ್ಕೆ ಅವರು ಸಿದ್ಧರಿಲ್ಲ. ಜೂನ್ 27ರಂದು ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ, ಸೆನ್ಸಾರ್ ಪ್ರಕ್ರಿಯೆ ಪೂರ್ಣಗೊಳ್ಳದ ಕಾರಣ ಸಿನಿಮಾ ಇನ್ನೂ ಹಾಗೆಯೇ ಇದೆ. ಮುಂದೇನಾಗುತ್ತದೆ ಎಂಬ ಕುತೂಹಲ ಮೂಡಿದೆ.
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆಯ ಸಹಾಯಕ ಸಚಿವ ಸುರೇಶ್ ಗೋಪಿ ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಅನುಪಮಾ ಪರಮೇಶ್ವರನ್ ಅವರು ಜಾನಕಿ ಹೆಸರಿನ ಪಾತ್ರ ಮಾಡಿದ್ದಾರೆ. ಈ ಸಿನಿಮಾದ ಟೈಟಲ್ ಬದಲಿಸುವಂತೆ ಸೆನ್ಸಾರ್ ಮಂಡಳಿ ಸೂಚಿಸಿದೆ. ಜಾನಕಿ ಎಂದರೆ ಹಿಂದೂ ದೇವತೆ ಜಾನಕಿ ಎಂದರ್ಥ. ಹೀಗಾಗಿ, ಟೈಟಲ್ ಬದಲಿಸಲು ಸೂಚಿಸಲಾಗಿದೆ.
ಕೇರಳ ಕಾನೂನು ವ್ಯವಸ್ಥೆಯ ಬಗ್ಗೆ ಸಿನಿಮಾ ಇದೆ. ಜಾನಕಿ (ಅನುಪಮಾ) ಬಾಳಲ್ಲಿ ಒಂದು ಆಘಾತಕಾರಿ ಘಟನೆ ನಡೆಯುತ್ತದೆ. ಈ ವೇಳೆ ಆಕೆ ನ್ಯಾಯಕ್ಕಾಗಿ ಹೋರಾಡುತ್ತಾಳೆ. ಈ ಸಿನಿಮಾದಲ್ಲಿ ಅನುಪಮಾ ಸಂತ್ರಸ್ತೆ ಆದರೆ, ಸುರೇಶ್ ಗೋಪಿ ಅವರದ್ದು ವಕೀಲನ ಪಾತ್ರ. ಸದ್ಯ ಈಗ ಶೀರ್ಷಿಕೆ ಬದಲಾವಣೆ ಕಾರಣಕ್ಕೆ ಸಿನಿಮಾ ಸುದ್ದಿಯಲ್ಲಿದೆ.