ಅನೇಕ ಪಾಲಕರು ಶಿಸ್ತು ಕಲಿಸುವ ಹೆಸರಿನಲ್ಲಿ ತಮ್ಮ ಮಕ್ಕಳಿಗೆ ನಿತ್ಯವೂ ಕೂಗುವುದು, ಬೈಯುವುದು, ಜೋರಾಗಿ ಮಾತನಾಡುವುದು ಸಾಮಾನ್ಯವೆಂದುಕೊಳ್ಳುತ್ತಾರೆ. ಕೆಲವೊಮ್ಮೆ ತಮ್ಮದೇ ಒತ್ತಡವನ್ನ ಮಕ್ಕಳ ಮೇಲೆ ಹಾಕುತ್ತಾರೆ. ಆದರೆ ಈ ಪ್ರವೃತ್ತಿಯು ಮಕ್ಕಳ ಭವಿಷ್ಯಕ್ಕೆ ಎಷ್ಟು ಕೆಟ್ಟದ್ದು ಎಂಬುದು ವಾಸ್ತವವಾಗಿ ಹೆತ್ತವರಿಗೆ ಗೊತ್ತೇ ಇಲ್ಲ. ಪಾಲಕರು ಸದಾ ಮಕ್ಕಳ ಮೇಲೆ ಕಿರಿಕಿರಿಯಾಗಿ ವರ್ತಿಸಿದರೆ, ಅದು ಅವರ ಮನಸ್ಸು, ನಡೆ ಹಾಗೂ ಭವಿಷ್ಯ ಕೆಡುಕುವ ಸಾಧ್ಯತೆ ಹೆಚ್ಚು.
ಭಾವನಾತ್ಮಕ ಕುಸಿತ: ಮಕ್ಕಳಿಗೆ ಬೈಯುವುದರಿಂದ ಭಯ, ಆತಂಕ ಹೆಚ್ಚಾಗುತ್ತದೆ. ಅವರು ಭಾವನಾತ್ಮಕವಾಗಿ ಕುಗ್ಗುತ್ತಾರೆ. ಪ್ರೀತಿ ನಿರೀಕ್ಷೆಯಲ್ಲಿರುವ ಮಕ್ಕಳು ಅಸುರಕ್ಷಿತತೆ ಅನುಭವಿಸುತ್ತಾರೆ.
ಬಾಂಧವ್ಯ ಹದಗೆಡುತ್ತದೆ: ಪಾಲಕರು ನಂಬಿಕೆಗೆ ಪ್ರತೀಕವಾಗಿರಬೇಕು. ಆದರೆ ಸದಾ ಕಿರುಚಾಡುವ ಮನೋಭಾವ ಮಕ್ಕಳನ್ನು ಹೆತ್ತವರಿಂದ ದೂರ ಮಾಡುತ್ತದೆ. ಅವರು ಪಾಲಕರೊಂದಿಗೆ ಮಾತನಾಡುವುದನ್ನು ಬಿಟ್ಟುಬಿಡುತ್ತಾರೆ.
ಆಕ್ರಮಣಕಾರಿ ವರ್ತನೆ ರೂಢಿಸುತ್ತಾರೆ: ಪಾಲಕರಿಂದ ಬರುವ ಆಕ್ರೋಶದ ಭಾಷೆ ಮಕ್ಕಳ ನಡವಳಿಕೆಯಲ್ಲಿ ಪ್ರತಿಬಿಂಬಿಸುತ್ತದೆ. ಅವರು ಸಹ ಕೂಗು, ಹಿಂಸೆ, ಕಿರುಚಾಡುವುದನ್ನು ಅಭ್ಯಾಸ ಮಾಡಿಕೊಳ್ಳುತ್ತಾರೆ.
ಓದು-ಕಲಿಕೆಯಲ್ಲಿ ಹಿಂದುಳಿಯುವಿಕೆ: ಸತತ ಒತ್ತಡದಿಂದ ಮಕ್ಕಳಲ್ಲಿ ಭಯ ಬೆಳೆದು, ಓದಿಗೆ ಏಕಾಗ್ರತೆ ಸಿಗುವುದಿಲ್ಲ. ಇದರಿಂದ ಕಲಿಕೆಯಲ್ಲಿ ಹಿಂದುಳಿಯುವ ಸಾಧ್ಯತೆ ಹೆಚ್ಚು.
ಆತ್ಮವಿಶ್ವಾಸ ಕುಂದುತ್ತದೆ: ಬೈಗುಳ, ಅಪಮಾನಗಳು ಮಕ್ಕಳಲ್ಲಿರುವ ಆತ್ಮವಿಶ್ವಾಸಕ್ಕೆ ದೊಡ್ಡ ಹೊಡೆತ ನೀಡುತ್ತವೆ. ಇದು ಅವರು ಮುಂದಿನ ಜೀವನದಲ್ಲಿಯೂ ದೊಡ್ಡ ತೊಂದರೆ ನೀಡಬಹುದು.