ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಭಾರೀ ಮಳೆಯ ಹಿನ್ನಲೆಯಲ್ಲಿ ರಾಜ್ಯದ ಉತ್ತರ ಕನ್ನಡ, ಬೆಳಗಾವಿ, ಹಾಸನ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ನಾಳೆ ರಜೆಯನ್ನು ಘೋಷಣೆ ಮಾಡಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.
ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆಯನ್ನು ಹಾಸನ ಡಿಸಿ ಕೆ ಎಸ್ ಲತಾಕುಮಾರಿ ಘೋಷಿಸಿ ಆದೇಶಿಸಿದ್ದಾರೆ.
ಇನ್ನು ಉತ್ತರ ಕನ್ನಡ ಜಿಲ್ಲೆಯಲ್ಲೂ ಮಳೆ ಆರ್ಭಟ ಮುಂದುವರೆದಿದೆ. ನಾಳೆ ಕೂಡ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಈ ಹಿನ್ನಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲ್ಲೂಕಿನ ಶಾಲಾ-ಕಾಲೇಜುಗಳಿಗೆ ನಾಳೆ ರಜೆಯನ್ನು ತಹಶೀಲ್ದಾರ್ ಶೈಲೇಶ್ ಪರಮಾನಂದ ಘೋಷಣೆ ಮಾಡಿದ್ದಾರೆ.
ಇನ್ನೂ ಬೆಳಗಾವಿ ಜಿಲ್ಲೆಯ ಬೆಳಗಾವಿ, ಖಾನಾಪುರ ತಾಲ್ಲೂಕಿನಲ್ಲೂ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಹೀಗಾಗಿ ಬೆಳಗಾವಿ, ಖಾನಾಪುರ ತಾಲ್ಲೂಕಿನ ಅಂಗನವಾಡಿ, ಶಾಲಾ-ಕಾಲೇಜುಗಳಿಗೆ ನಾಳೆ ರಜೆಯನ್ನು ನೀಡಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಆದೇಶಿಸಿದ್ದಾರೆ.