ಹದಿಹರೆಯ (puberty) ಒಂದು ಸುಂದರವಾದ ನಾಜೂಕಾದ ಹಂತ. ಈ ಹಂತದಲ್ಲಿ ಹೆಣ್ಣುಮಕ್ಕಳ ದೇಹ ಹಾಗೂ ಮನಸ್ಸು ತುಂಬಾನೇ ಬದಲಾಗುತ್ತದೆ. ಇದು ಅವರಿಗೆ ಹೊಸ ಅನುಭವ, ಹೊಸ ಚಿಂತೆ ಹಾಗೂ ಅನೇಕ ಕುತೂಹಲಗಳನ್ನು ಉಂಟುಮಾಡುತ್ತದೆ. ಇದರಿಂದಾಗಿ ಕೆಲವೊಮ್ಮೆ ಅವರು ಒಂಟಿತನ, ಕೋಪ, ಮುಜುಗರ ಮತ್ತು ಗೊಂದಲ ಅನುಭವಿಸಬಹುದು. ಈ ಸಮಯದಲ್ಲಿ ಪಾಲಕರ ಪಾತ್ರ ಅತ್ಯಂತ ಪ್ರಭಾವಶಾಲಿ ಮತ್ತು ಸೂಕ್ಷ್ಮವಾಗಿರುತ್ತದೆ. ಹೆಣ್ಣುಮಕ್ಕಳಿಗೆ ನಂಬಿಕೆಯ ಸ್ನೇಹಿತರಂತೆ ಅವರೊಂದಿಗೆ ಬಾಂಧವ್ಯ ಬೆಳೆಸುವುದು ಪ್ರಮುಖ.
ಮುಕ್ತ ಸಂಭಾಷಣೆಗೆ ಅವಕಾಶ ನೀಡಿ: ಮಗಳು ಏನು ಅನುಭವಿಸುತ್ತಿದ್ದಾಳೆ ಎಂಬುದನ್ನು ತಿಳಿಯಲು ತಾಳ್ಮೆಯೊಂದಿಗೆ ಕೇಳಿ. ತಕ್ಷಣ ಜಡ್ಜ್ ಮಾಡದೆ, ನಿಮ್ಮ ಅನುಭವಗಳನ್ನು ಹಂಚಿಕೊಳ್ಳಿ.
ಗಟ್ಟಿಯಾದ ಸ್ನೇಹದ ಬಂಧ ಕಟ್ಟಿಕೊಳ್ಳಿ: ಅವಳ ಹವ್ಯಾಸಗಳಲ್ಲಿ ಭಾಗವಹಿಸಿ, ಸಮಯ ಕಳೆಯಿರಿ. ಮೊಬೈಲ್ ಅಥವಾ ಇತರ ತಂತ್ರಜ್ಞಾನಗಳಿಗೆ ಅವಳು ಅತಿಯಾದ ಅವಲಂಬನೆ ಹೊಂದದಂತೆ ನೋಡಿಕೊಳ್ಳಿ.
ಸ್ವಾತಂತ್ರ್ಯಕ್ಕೆ ಗೌರವ ನೀಡಿ: ಅವಳ ನಿರ್ಧಾರಗಳಿಗೆ ಪ್ರೋತ್ಸಾಹ ನೀಡಿ. ತಪ್ಪಿದರೆ ಕೋಪಗೊಳ್ಳದೇ ಶಾಂತಿಯುತವಾಗಿ ಮಾರ್ಗದರ್ಶನ ನೀಡಿ.
ಅವಳ ನಂಬಿಕೆಯನ್ನು ಗಳಿಸಿ: ಯಾವತ್ತೂ ಅವಳ ಖಾಸಗಿ ವಿಷಯಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳಬೇಡಿ. ಇದು ಅವಳಿಗೆ ಮುಜುಗರ ಮತ್ತು ಅಸುರಕ್ಷತೆ ಉಂಟುಮಾಡುತ್ತದೆ.
ಅವಳ ಆಸಕ್ತಿಗಳಿಗೆ ಬೆಂಬಲ ನೀಡಿ: ಸ್ಪರ್ಧೆ, ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಪ್ರೋತ್ಸಾಹಿಸಿ. ನಿಮ್ಮ ಪ್ರೋತ್ಸಾಹವೇ ಅವಳಿಗೆ ಆತ್ಮವಿಶ್ವಾಸ.
ಹದಿಹರೆಯದಲ್ಲಿ ಮಕ್ಕಳೊಂದಿಗೆ ನಿಕಟ ಬಾಂಧವ್ಯ ಹೊಂದುವುದು, ಅವರ ಭವಿಷ್ಯದ ಗುಣಾತ್ಮಕ ವ್ಯಕ್ತಿತ್ವದ ತಳಹದಿಯನ್ನೇ ರೂಪಿಸಬಹುದು.