ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಲೆ ಮಹದೇಶ್ವರ ವನ್ಯಜೀವಿಧಾಮದ ಮೀಣ್ಯಂ ಪ್ರದೇಶದಲ್ಲಿ ಐದು ಹುಲಿಗಳು ಅನುಮಾನಾಸ್ಪದವಾಗಿ ಸಾವಿಗೀಡಾದ ಪ್ರಕರಣದ ಬೆನ್ನಲ್ಲೇ, ಅರಣ್ಯ ಇಲಾಖೆ ಮೂವರನ್ನು ಬಂಧಿಸಿದೆ. ಹುಲಿಗಳ ಸಾವಿಗೆ ಕಾರಣ ವಿಷವಿರುವುದು ಖಚಿತವಾದ ಬಳಿಕ, ಹಸುವಿನ ಮಾಲೀಕ ಕೋನಪ್ಪ ಮತ್ತು ಆತನ ಸಹಾಯಕರಾದ ಮಾದುರಾಜು ಹಾಗೂ ನಾಗರಾಜು ಎಂಬವರನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಪೊಲೀಸರು ನೀಡಿದ ಮಾಹಿತಿಯಂತೆ, ಕೋನಪ್ಪನ ಹಸುವನ್ನು ಒಂದು ಹುಲಿ ಕೊಂದಿದ್ದರಿಂದ ಕೋಪಗೊಂಡ ಆತ, ಮತ್ತು ಇತರ ಇಬ್ಬರು ಸೇರಿ, ಮೃತ ಹಸುವಿನ ದೇಹದ ಮೇಲೆ ಕೀಟನಾಶಕವನ್ನು ಸಿಂಪಡಿಸಿದ್ದರು. ಈ ವಿಷಪೂರಿತ ಮಾಂಸವನ್ನು ತಿಂದ ತಾಯಿ ಹುಲಿ ಹಾಗೂ ನಾಲ್ಕು ಮರಿಗಳು ಮೃತಪಟ್ಟಿದ್ದು, ತಾಯಿ ಹುಲಿಗೆ 8 ವರ್ಷ ಹಾಗೂ ಮರಿಗಳಿಗೆ ಕೇವಲ 10 ತಿಂಗಳಷ್ಟೇ ಆಗಿರುತ್ತಿತ್ತು.
ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ, 1972ರ ಸೆಕ್ಷನ್ 9 ಮತ್ತು 27 ಹಾಗೂ ಕರ್ನಾಟಕ ಅರಣ್ಯ ಕಾಯ್ದೆ, 1963ರ ಸೆಕ್ಷನ್ 24ರಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬಂಧಿತರಿಗೆ ಪ್ರಾಥಮಿಕ ಆರೋಗ್ಯ ತಪಾಸಣೆ ನಡೆಸಿ, ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ನ್ಯಾಯಾಧೀಶರು ಆರೋಪಿಗಳನ್ನು ಜೂನ್ 30ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ವಿಚಾರಣೆ ಮುಂದುವರಿಯುವ ನಿರೀಕ್ಷೆಯಿದ್ದು, ಸೋಮವಾರ ಅವರನ್ನು ಮತ್ತೆ ಅರಣ್ಯ ಇಲಾಖೆ ವಶಕ್ಕೆ ಪಡೆಯಬಹುದು ಎಂದು ಮೂಲಗಳು ತಿಳಿಸಿವೆ.
ಅರಣ್ಯ ಇಲಾಖೆ ತನಿಖೆ ಆರಂಭಿಸಿದಾಗ, ಈ ಮೂವರು ಸೇರಿ ಸ್ಥಳೀಯರು ಯಾವುದೇ ಮಾಹಿತಿ ಗೊತ್ತಿರದಂತೆ ನಟಿಸಿದ್ದರು. ಆದರೆ ಅಧಿಕಾರಿಗಳ ತೀವ್ರ ವಿಚಾರಣೆ ವೇಳೆ, ಕೊನೆಗೆ ತಮ್ಮ ತಪ್ಪುಗಳನ್ನು ಒಪ್ಪಿಕೊಂಡಿದ್ದಾರೆ.