ಹೊಸದಿಗಂತ ಡಿಜಿಟಲ್ ಡೆಸ್ಕ್:
ಗೋಲ್ಡ್ ಸ್ಮಗ್ಲಿಂಗ್ ಪ್ರಕರಣಕ್ಕೆ ಸಂಬಂಧಿಸಿ ಬಂಧನಕ್ಕೊಳಗಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಯಾಗಿರುವ ನಟಿ ರನ್ಯಾ ರಾವ್ ಈಗ ಜೈಲಿನಲ್ಲಿಯೇ ಮತ್ತೊಂದು ಸಂಕಟ ಶುರುವಾಗಿದೆ. ಮೊದಲಿಗೆ ಜೈಲಿನ ವಾತಾವರಣ, ಆಹಾರ ಹಾಗೂ ನಿಯಮಗಳಿಗೆ ಹೊಂದಿಕೊಳ್ಳಲು ಕಷ್ಟಪಟ್ಟಿದ್ದ ನಟಿ, ಕಾಲಕ್ರಮೇಣ ಅಲ್ಲಿ ಹೊಂದಿಕೊಳ್ಳುತ್ತಿದ್ದಂತೆಯೇ, ಇದೀಗ ಸಹ ಕೈದಿಗಳ ಕಿರುಕುಳಕ್ಕೆ ಒಳಗಾಗಿದ್ದಾರೆ ಎನ್ನಲಾಗಿದೆ.
ವರದಿಗಳ ಪ್ರಕಾರ, ರನ್ಯಾ ರಾವ್ ಇರುವ ಬ್ಯಾರಕ್‌ನ ಮಹಿಳಾ ಕೈದಿಗಳು ನಿರಂತರವಾಗಿ ಆಕೆಗೆ ಕಿರುಕುಳ ನೀಡುತ್ತಿದ್ದು, ಚಿನ್ನ ಕಳ್ಳಿ, ಏನ್ ಸಮಾಚಾರ? ಹೇಗಿದೆ ಜೈಲು ಅಂತಾ ಹೀಯಾಳಿಸಿ ಮಾತನಾಡುತ್ತಿದ್ದಾರೆ. ಈ ರೀತಿಯ ಮಾತುಗಳಿಂದ ಮಾನಸಿಕವಾಗಿ ಒತ್ತಡಕ್ಕೆ ಒಳಗಾಗಿರುವ ರನ್ಯಾ, ಜೈಲು ಸಿಬ್ಬಂದಿಯೊಂದಿಗೆ ಸಂಪರ್ಕ ಮಾಡಿ, ತಾನು ಇರುವ ಬ್ಯಾರಕ್‌ನಿಂದ ಬೇರೆಡೆ ಸ್ಥಳಾಂತರಿಸಬೇಕು ಎಂಬ ಮನವಿಯನ್ನು ಸಲ್ಲಿಸಿದ್ದಾರೆ.
ಜೈಲು ಅಧಿಕಾರಿಗಳು ಈ ಕುರಿತು ಪರಿಶೀಲನೆ ನಡೆಸುತ್ತಿರುವುದಾಗಿ ತಿಳಿದುಬಂದಿದ್ದು, ಮುಂದಿನ ದಿನಗಳಲ್ಲಿ ನಟಿಗೆ ಬೇರೆ ಬ್ಯಾರಕ್ ಒದಗಿಸುವ ಸಾಧ್ಯತೆಯಿದೆ.