ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿಯವರ “ಮನ್ ಕಿ ಬಾತ್” ರೇಡಿಯೋ ಕಾರ್ಯಕ್ರಮದ 123ನೇ ಸಂಚಿಕೆ ಇಂದು ದೇಶಾದ್ಯಂತ ಪ್ರಸಾರಗೊಂಡಿತು. ಈ ಸಂಚಿಕೆಯಲ್ಲಿ ಪ್ರಧಾನಿ ಮೋದಿ ಅಂತಾರಾಷ್ಟ್ರೀಯ ಯೋಗ ದಿನದ ಕುರಿತು ಮಾತನಾಡಿದರು.
ಕಾರ್ಯಕ್ರಮದ ಆರಂಭದಲ್ಲಿಯೇ ಪ್ರಧಾನಿ ಮೋದಿ, ಜೂನ್ 21 ರಂದು ದೇಶ ಮತ್ತು ಜಗತ್ತಿನ ಕೋಟ್ಯಂತರ ಜನರು ಯೋಗ ದಿನಾಚರಣೆಯಲ್ಲಿ ಭಾಗವಹಿಸಿದ್ದನ್ನು ಅವರು ಉಲ್ಲೇಖಿಸಿದರು. ಯೋಗ ದಿನವು ಪ್ರಾರಂಭವಾಗಿ ಈಗ ದಶಕ ಪೂರೈಸಿದೆ. ಪ್ರತಿವರ್ಷ ಇದು ಹೆಚ್ಚು ಭವ್ಯವಾಗುತ್ತಿದ್ದು, ಹೆಚ್ಚು ಜನರು ತಮ್ಮ ಜೀವನ ಶೈಲಿಯಲ್ಲಿ ಯೋಗವನ್ನು ಅಳವಡಿಸುತ್ತಿರುವುದಾಗಿ ಹೇಳಿದರು.
ಈ ವರ್ಷದ ಯೋಗ ದಿನದ ಧ್ಯೇಯವಾಕ್ಯ ‘ಒಂದು ಭೂಮಿಗಾಗಿ ಯೋಗ, ಒಂದು ಆರೋಗ್ಯ’ ಎಂಬುದು ವಿಶೇಷವಾಗಿತ್ತು ಎಂದು ಮೋದಿ ಅಭಿಪ್ರಾಯಪಟ್ಟರು. “ಇದು ಕೇವಲ ಘೋಷವಾಕ್ಯವಲ್ಲ, ‘ವಸುಧೈವ ಕುಟುಂಬಕಂ’ ಎಂಬ ಭಾರತೀಯ ತತ್ವದ ಪ್ರತಿಬಿಂಬವಾಗಿದೆ” ಎಂದ ಅವರು, ಈ ವರ್ಷದ ಯೋಗ ದಿನದ ಆಯೋಜನೆ ಹೆಚ್ಚಿನವರನ್ನು ಪ್ರೇರೇಪಿಸಲಿದೆ ಎಂದರು.
ಪ್ರಧಾನಿ ಮೋದಿ ಅವರು ವಿವಿಧ ರಾಜ್ಯಗಳು ಮತ್ತು ದೇಶಗಳಲ್ಲಿನ ಯೋಗ ಆಚರಣೆಗಳ ಕುರಿತು ವಿವರ ನೀಡುತ್ತಾ, ನ್ಯೂಯಾರ್ಕ್, ಲಂಡನ್, ಪ್ಯಾರಿಸ್ ಸೇರಿದಂತೆ ಜಗತ್ತಿನ ಪ್ರಮುಖ ನಗರಗಳಿಂದ ಬಂದ ಯೋಗದ ದೃಶ್ಯಗಳಲ್ಲೂ ಭಾರತೀಯ ಪರಂಪರೆಯ ಪ್ರತಿಷ್ಠೆಯ ಕಾಣಿಸುತ್ತಿದೆ ಎಂದರು.
ತೆಲಂಗಾಣದಲ್ಲಿ ಮೂರು ಸಾವಿರ ದಿವ್ಯಾಂಗರು ಯೋಗ ಶಿಬಿರದಲ್ಲಿ ಭಾಗವಹಿಸಿದ್ದನ್ನು ಸ್ಮರಿಸಿದ ಅವರು, ದೆಹಲಿಯಲ್ಲಿ ಯೋಗವನ್ನು ಶುದ್ಧ ಯಮುನೆಯ ಸಂಕಲ್ಪದೊಂದಿಗೆ ಜೋಡಿಸಿ, ನದಿಯ ದಂಡೆಯಲ್ಲಿ ಯೋಗ ಮಾಡಿದ ಜನರ ಕುರಿತು ಶ್ಲಾಘನೆ ವ್ಯಕ್ತಪಡಿಸಿದರು. ಜೊತೆಗೆ, ಜಮ್ಮು ಮತ್ತು ಕಾಶ್ಮೀರದ ಚೆನಾಬ್ ಸೇತುವೆಯ ಮೇಲೆಯೂ ಯೋಗ ಆಚರಣೆ ನಡೆದಿದೆಯೆಂದು ತಿಳಿಸಿದರು.