ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಮಹತ್ವದ ಹೆಜ್ಜೆ ಇಟ್ಟಿದೆ. ಈಗ ‘ನಮ್ಮ ಮೆಟ್ರೋ’ ಟಿಕೆಟ್‌ಗಳನ್ನು ಐದು ಡಿಜಿಟಲ್ ಆ್ಯಪ್‌ಗಳ ಮೂಲಕ ಖರೀದಿಸಬಹುದಾಗಿದೆ. ಇದುವರೆಗೆ ಮೆಟ್ರೋ ಟಿಕೆಟ್ ಖರೀದಿಗೆ ವಾಟ್ಸ್‌ಆ್ಯಪ್ ಚಾಟ್‌ಬಾಟ್ ಮತ್ತು ಪೇಟಿಎಂ ಆಯ್ಕೆಗಳು ಮಾತ್ರ ಲಭ್ಯವಿತ್ತು,
ಮೈಲ್ಸ್ ಆ್ಯಂಡ್ ಕಿಲೋಮೀಟರ್ ಟುಮ್ಯಾಕೋ, ರೆಡ್ ಬಸ್, ಔಟ್ ಪಾಥ್ ಮತ್ತು ಹೈವೇ ಡಿಲೈಟ್ ಆ್ಯಪ್ ಗಳು ಸೇರಿದಂಯೇ ಒಟ್ಟು ೫ ಆ್ಯಪ್‌ಗಳಲ್ಲಿ ಟಿಕೆಟ್ ಬುಕ್ ಮಾಡುವವರಿಗೆ ಶೇ.20-30 ರಿಯಾಯಿತಿ ನೀಡಲಾಗುತ್ತಿದೆ.
ಈಗ ಬಿಎಂಟಿಸಿ ಪ್ರಯಾಣಿಕರ ಅನುಕೂಲಕ್ಕಾಗಿ ಹೊಸ ಆ್ಯಪ್‌ಗಳನ್ನೂ ಬಳಸಲು ಅವಕಾಶ ನೀಡಿದೆ. ರ್ಯಾಪಿಡೋ ಹಾಗೂ ನಮ್ಮ ಯಾತ್ರಿಯಲ್ಲಿ ಟಿಕೆಟ್ ಟೆಸ್ಟಿಂಗ್ ಹಂತದಲ್ಲಿದ್ದು, ಶೀಘ್ರದಲ್ಲೇ ಇವುಗಳನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಲಾಗುವುದು.
ಅಲ್ಲದೇ ಬೈಯಪ್ಪನಹಳ್ಳಿ ನಿಲ್ದಾಣದಲ್ಲಿ ಅಳವಡಿಸಿರುವ ಸ್ವಯಂ ಸೇವಾ ಟಿಕೆಟ್ ಯಂತ್ರಗಳು 30 ಸೆಕೆಂಡುಗಳಲ್ಲಿ ಟಿಕೆಟ್ ನೀಡುತ್ತಿವೆ. ಇದು ದಟ್ಟಣೆಯ ಸಮಯದಲ್ಲಿ ಟಿಕೆಟ್‌ಗಾಗಿ ನೂಕುನುಗ್ಗಲು ತಪ್ಪಿಸಲು ನೆರವಾಗುತ್ತಿದೆ.
ಈ ನಡುವೆ ಎಲೆಕ್ಟ್ರಾನಿಕ್ ಸಿಟಿ ಸಂಪರ್ಕಿಸುವ ಹಳದಿ ಮಾರ್ಗದ (ಆರ್.ವಿ. ರಸ್ತೆ – ಬೊಮ್ಮಸಂದ್ರ) ತಪಾಸಣೆಯು ಜುಲೈ 15 ಅಥವಾ 16ರಂದು ನಡೆಯುವ ಸಾಧ್ಯತೆ ಇದೆ. ಈ ಮಾರ್ಗದ ಕಾಮಗಾರಿ ಪೂರ್ಣಗೊಂಡಿದ್ದು, ಸಂಚಾರಕ್ಕೆ ಅಗತ್ಯವಿರುವ ಮೂರು ರೈಲುಗಳೂ ಈಗಾಗಲೇ ಬಂದಿವೆ. ಸಿಗ್ನಲಿಂಗ್ ತಪಾಸಣೆಯ ವಿಳಂಬದಿಂದ ಭದ್ರತಾ ಪರಿಶೀಲನೆ ಮುಂದೂಡಲಾಗಿದ್ದರೂ, ಈಗ ಎಲ್ಲ ತಯಾರಿಗಳೂ ಅಂತಿಮ ಹಂತಕ್ಕೆ ತಲುಪಿವೆ ಎಂದು ಬಿಎಂಆರ್‌ಸಿಎಲ್ ಮೂಲಗಳು ತಿಳಿಸಿವೆ.